ಕೊರಟಗೆರೆ: ರೈತನೋರ್ವನ ಜಾನುವಾರು ಕೊಟ್ಟಿಗೆಗೆ ಬಿದ್ದ ಆಕಸ್ಮಿಕ ಬೆಂಕಿಯಿಂದ ಕರು ಮತ್ತು ಹಸುಗಳು ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಕೊರಟಗೆರೆ ತಾಲ್ಲೂಕಿನ ಸಿಎನ್ ದುರ್ಗಾ ಹೋಬಳಿಯ ತೋವಿನಕೆರೆ ಗ್ರಾಮದ ಕೊಂಡಪ್ಪ ಬಿನ್ ದೊಡ್ಡ ತಿಮ್ಮಯ್ಯ ಎಂಬುವರ ಸರ್ವೇ ನಂ.15/3ರಲ್ಲಿ ನಿರ್ಮಿಸಲಾದ ಜಾನುವಾರು ಕೊಟ್ಟಿಗೆಗೆ ತಡರಾತ್ರಿ ಆಕಸ್ಮಿಕ ಬೆಂಕಿ ತಗಲಿ ಹಸುಗಳು ಸ್ಥಳದಲ್ಲೇ ಮೃತಪಟ್ಟಿದ್ದು, ರೈತನ ಸಮಯ ಪ್ರಜ್ಞೆಯಿಂದ ಗಾಯಗೊಂಡ ಕರುವನ್ನು ರಕ್ಷಣೆ ಮಾಡಲಾಗಿತ್ತು.
ಘಟನೆಯ ಬಗ್ಗೆ ಪಶು ಇಲಾಖೆಯ ವೈದ್ಯರಿಗೆ ಮಾಹಿತಿ ತಿಳಿಸಿದ ಕೂಡಲೇ ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಕರುವಿಗೆ ಚಿಕಿತ್ಸೆ ನೀಡಲಾಗಿತ್ತು, ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಕರು ಸಹ ಮೃತಪಟ್ಟಿದ್ದು, 1ಕರು, 4ಹಸು ಒಟ್ಟು 5 ಜಾನುವಾರುಗಳು ಬೆಂಕಿ ಕಿನ್ನಾಲೆಗೆ ಆಹುತಿಯಾಗಿದ್ದು, ಜಾನುವಾರು ಕಳೆದುಕೊಂಡ ರೈತನ ಆಕ್ರಂದನ ಮುಗಿಲುಮಟ್ಟಿತ್ತು.
ಕೊಟ್ಟಿಗೆಗೆ ಬೆಂಕಿ ಬಿದ್ದ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ವಾಹನೊಂದಿಗೆ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಸಮಯದ ವೇಳೆಗೆ ಹಸುಗಳು ಬೆಂಕಿಯ ಕಿನ್ನಾಲಿಗೆಗೆ ಸ್ಥಳದಲ್ಲೇ ಸಜೀವ ದಹನವಾಗಿತ್ತು, ಮಂಗಳವಾರ ಬೆಳಗ್ಗೆ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗಭೂಷಣ್ ಸ್ಥಳಕ್ಕೆ ಭೇಟಿ ನೀಡಿ ಮೃತ ಹಸುಗಳ ರೈತನಿಗೆ ಸಾಂತ್ವನ ತಿಳಿಸಿ ಇಲಾಖೆಯಿಂದ ಸಿಗುವಂತಹ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.