ಗುಬ್ಬಿ: ಗುಬ್ಬಿ ಪಟ್ಟಣ ಪಂಚಾಯಿತಿ ಸದಸ್ಯಜಿ.ಎನ್.ಅಣ್ಣಪ್ಪ ಸ್ವಾಮಿ ಹನಿ ಟ್ರ್ಯಾಪ್ ಬಲೆಗೆ ಬಿದ್ದಿದ್ದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಅಣ್ಣಪ್ಪ ಸ್ವಾಮಿ ಪ್ರಕರಣ ದಾಖಲು ಮಾಡಿದ್ದಾರೆ.
ಫೇಸ್ ಬುಕ್ ನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಗೆ ಒಪ್ಪಿಗೆ ನೀಡಿ ನಂತರ ಹಾಯ್, ಬಾಯ್, ಗುಡ್ ಮಾನಿರ್ಂಗ್ ಅಂತೆಲ್ಲ ಬೆಳೆದ ಸಲುಗೆ ಮಿತಿ ಮೀರಿ ವೀಡಿಯೋ ಕಾಲಿಂಗ್ ಮಾಡಿ ಮಾತನಾಡುವ ಮಟ್ಟ ತಲುಪಿದ್ದು ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆ ಹಲವು ಕಡೆ ಬಲವಂತವಾಗಿ ಕರೆಸಿಕೊಂಡು ಮದುವೆಯಾಗುವಂತೆ ಒತ್ತಾಯಿಸುತ್ತಿದಳು ಎನ್ನಲಾಗಿದೆ.
ನಾನು ನಿಮ್ಮನ್ನ ಪ್ರೀತಿಸುತ್ತಿದ್ದೇನೆ ಮದುವೆ ಮಾಡಿಕೊಳ್ಳಿ ಎಂದು ಒತ್ತಡ ಹೇರುತ್ತಿದ್ದು ಇದಕ್ಕೆ ಒಪ್ಪದಿದ್ದ ಕಾರಣ ಸ್ನೇಹಿತರೊಂದಿಗೆ ಸೇರಿ ಅವಳ ಜೊತೆಗಿನ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಹಣದ ಬೇಡಿಕೆ ಇಟ್ಟಿದ್ದಾಳೆ ಎಂಬುದು ಗಂಭೀರ ಆರೋಪವಾಗಿದೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಮಾಡುವುದಾಗಿ ಹೆದರಿಸಿ ಬೆದರಿಸಿ ನಾನು ಕರೆದ ಕೂಡಲೇ ಬರುವಂತೆ ತಾಕೀತು ಮಾಡಿ ಅಲ್ಲಲ್ಲಿ ಕರೆಸಿಕೊಂಡು ರೂಮ್ ಮಾಡಿಸಿ ಅವಳಿಗೆ ಬೇಕಾದಂತೆ ನಡೆದುಕೊಳ್ಳುತ್ತಿದ್ದಳು ಎಂದು ಉಲ್ಲೇಖಿಸಲಾಗಿದೆ, ಈ ನಡುವೆ ದೊಡ್ಡಬಳ್ಳಾಪುರಕ್ಕೆ ತೆರಳಿ ಮಹಿಳೆ ಜೊತೆ ರೂಮ್ ನಲ್ಲಿ ಇದ್ದಾಗ ದಿಢೀರ್ ಪ್ರತ್ಯಕ್ಷವಾದ ಇಬ್ಬರು ಹುಡುಗರು ಸದಸ್ಯನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಆಗ ನಾನು ಹನಿಟ್ರ್ಯಾಪ್ ಗೆ ಬಿದ್ದಿದ್ದೇನೆ ಎಂಬುದು ತಿಳಿದಿದೆ.
ಈಗಾಗಲೇ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಸಂಬಂಧ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದ್ದು, ಮಹಿಳೆಯರ ಜೊತೆ ಸೇರಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಗುಬ್ಬಿ ಪಟ್ಟಣದ ಭರತ್ ಮತ್ತು ಬಿಲ್ಲೇಪಾಳ್ಯದ ಬಸವರಾಜು ಎಂಬುವರ ಸೆರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.