ಕುಣಿಗಲ್: ತಾಲೂಕಿನ ಕಂದಾಯ ಇಲಾಖೆ ಇಬ್ಬರು ನೌಕರರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಅಮಾನತಿಗೆ ಒಳಗಾದ ನೌಕರರನ್ನು ಕುಣಿಗಲ್ ತಾಲೂಕು ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕ ಪರಮೇಶ್, ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕ ರವಿಕುಮಾರ್ ಎಂದು ಗುರುತಿಸಲಾಗಿದೆ, ಪರಮೇಶ್, ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸುವಾಗ ಸರ್ಕಾರಿ ಭೂಮಿಗಳನ್ನು ಬಗರ್ ಹುಕುಂ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾಗದೆ ಇದ್ದರೂ ಅಕ್ರಮವಾಗಿ, ಕಾನೂನು ಬಾಹಿರವಾಗಿ ಖಾತೆ ಮಾಡಿರುವ ಬಗ್ಗೆ ಆರೋಪದ ಮೇರೆಗೆ ತಿಪಟೂರು ಉಪವಿಭಾಗಾಧಿಕಾರಿಗಳು ನೀಡಿದ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಆದೇಶಿಸಿದ್ದಾರೆ.
ದ್ವಿತೀಯ ದರ್ಜೆ ಸಹಾಯಕರಾಗಿ ವಿಷಯ ನಿರ್ವಾಹಕನಾಗಿ ತುರುವೇಕೆರೆ ತಾಲೂಖು ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ರವಿಕುಮಾರ್ ತುರುವೇಕರೆ ತಾಲೂಕು ಮಾಯಸಂದ್ರ ಹೋಬಳಿಯ ಸರ್ಕಾರಿ ಜಮೀನುಗಳು ಬಗರ್ ಹುಕುಂ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರು ಆಗದೆ ಇದ್ದರೂ ಕಾನೂನು ಬಾಹಿರವಾಗಿ ಖಾತೆ ಮಾಡಿರುವ ಆರೋಪದ ಮೇರೆಗೆ ತಿಪಟೂರುಉಪ ವಿಭಾಗಾಧಿಕಾರಿಗಳು ನೀಡಿದ ವರದಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಆದೇಶಿಸಿದ್ದಾರೆ.