ಪ್ರೀತಿಯಲ್ಲಿ ಮೋಸ- ಯುವತಿ ಸಾವು- ಅಂಗಾಂಗ ದಾನ
ಮಧುಗಿರಿ: ಪ್ರೀತಿಯಲ್ಲಿ ಮೋಸ ಹೋದ ಯುವತಿಯೊಬ್ಬರು ಹುಡುಗ ಕೈಕೊಟ್ಟನೆಂದು ಆತ್ಮಹತ್ಯೆಗೆ ಯತ್ನಿಸಿ 10 ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಬದುಕುವುದಿಲ್ಲವೆಂದು ಖಚಿತವಾದ ಹಿನ್ನೆಲೆಯಲ್ಲಿ ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಏನಿದು ಪ್ರಕರಣ: ತಾಲೂಕಿನ ದೊಡ್ಡೇರಿ ಹೋಬಳಿಯ ಬಡಿಗೊಂಡನಹಳ್ಳಿ ಗ್ರಾಮದ ಯುವತಿ ಬಿ.ಎಸ್.ಲಿಖಿತ (23) ಎಂಬುವವರು ಸೀಮಾಂಧ್ರದ ಅಗಳಿ ಮಂಡಲ್ನ ರಾಗಿ ನಿಂಗನಹಳ್ಳಿ ಗ್ರಾಮದ ಕಾರ್ ಡ್ರೈವರ್ ಚೇತನ್ ಎಂಬ ಯುವಕ ಪರಸ್ಪರ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ, ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಯುವತಿ ಯುವಕ ಚೇತನ್ ನನ್ನು ಬಹುವಾಗಿ ನಂಬಿದ್ದು, ಯುವಕನ ಮಾತಿಗೆ ಮರುಳಾಗಿ ಮೊದಲ ಬಾರಿ 30 ಗ್ರಾಂ ಮತ್ತು 2 ನೇ ಸಲ 50 ಗ್ರಾಂ ಸೇರಿ ಸುಮಾರು 80 ಗ್ರಾಂ ಬಂಗಾರ ನೀಡಿದ್ದರು ಎನ್ನಲಾಗಿದೆ.
ಮಾರ್ಚ್ 1 ರಂದು ಯುವಕ ಚೇತನ್ ಏಕಾಏಕಿ ಬೇರೆ ಮದುವೆಯಾಗಿದ್ದು, ಇದರಿಂದ ಯುವತಿ ಮಾನಸಿಕವಾಗಿ ಬಹಳಷ್ಟು ನೊಂದುಕೊಂಡಿದ್ದರು ಎನ್ನಲಾಗಿದೆ, ಯುವತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಾರ್ಚ್ 2 ರಂದು ಸ್ವಗ್ರಾಮಕ್ಕೆ ಹಿಂದಿರುಗಿ ತಾನು ಪ್ರೀತಿಯಲ್ಲಿ ಮೋಸ ಹೋದ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಿದ್ದು, ಯುವಕನನ್ನು ನಂಬಿ ಹಣ ಮತ್ತು ಒಡವೆ ನೀಡಿರುವುದಾಗಿ ಮಾಹಿತಿ ನೀಡಿದ್ದಾಳೆ, ಯುವತಿಯನ್ನು ಸಮಾಧಾನ ಪಡಿಸಿದ ಯುವತಿಯ ತಾಯಿ ಇನ್ನು ಬೆಂಗಳೂರಿನಲ್ಲಿ ಇರುವುದು ಬೇಡ, ಬೆಂಗಳೂರಿಗೆ ತೆರಳಿ ಯುವತಿಯು ತಂಗಿದ್ದ ರೂಂ ಖಾಲಿ ಮಾಡಿಕೊಂಡು ಬರೋಣ ಎಂದು ಹೇಳಿದಾಗ ಯುವತಿ ಲಿಖಿತ ಸಮ್ಮತಿಸಿದ್ದಾಳೆ, ಮಾ. 3 ರಂದು ಬೆಳಗ್ಗೆ ಎಂದಿನಂತೆ ಯುವತಿಯ ಪೋಷಕರು ಮನೆ ಕೆಲಸದಲ್ಲಿ ತೊಡಗಿದ್ದಾಗ ಯುವತಿ ಏಕಾಏಕಿ ಕೋಣೆಯೊಂದರೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಇದನ್ನು ನೋಡಿದ ಯುವತಿಯ ತಾಯಿ ಕಿರುವಿಕೊಂಡಾಗ ಅಕ್ಕ-ಪಕ್ಕದ ನಿವಾಸಿಗಳು ಕೋಣೆಯ ಬಾಗಿಲು ಒಡೆದು ಯುವತಿಯನ್ನು ರಕ್ಷಿಸಲು ಯತ್ನಿಸಿದ್ದು, ಅಷ್ಟರಲ್ಲಾಗಲೇ ಲಿಖಿತ ಪರಿಸ್ಥಿತಿ ಗಂಭೀರವಾಗಿದೆ, ತಕ್ಷಣ ಲಿಖಿತಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, 10 ದಿನಗಳ ಕಾಲ ಕೋಮಾದಲ್ಲಿದ್ದ ಲಿಖಿತಾ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಮಾ. 13 ರಂದು ಕೊನೆಯುಸಿರೆಳೆದಿದ್ದು, ಯುವತಿಯ ಇಚ್ಚೆಯಂತೆ ಅವರ ಪೋಷಕರು ಲಿಖಿತಾ ಅವರ ಅಂಗಾಂಗಗಳಾದ ಹೃದಯ, ಕಿಡ್ನಿ ಮತ್ತು ಶ್ವಾಸಕೋಶ ದಾನ ಮಾಡಿದ್ದು, ಸಾವಿನಲ್ಲೂ ಲಿಖಿತಾ ಸಾರ್ಥಕತೆ ಮೆರೆದಿದ್ದಾರೆ.
ಈಗ ಯುವತಿಯ ಪೋಷಕರು ಲಿಖಿತಾರಿಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.