ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ವಿಧಾನಸೌಧದ ಮೊಗಸಾಲೆಯಲ್ಲೂ ಹನಿಟ್ರ್ಯಾಪ್ ಕುರಿತು ಗುಸು ಗುಸು ಚರ್ಚೆಗಳು ನಡೆಯುತ್ತಿವೆ. ಕೆಲವು ಸಚಿವರು ಬಹಿರಂಗವಾದ ಹೇಳಿಕೆ ನೀಡುತ್ತಿದ್ದು, ಪ್ರಭಾವಿ ಸಚಿವರನ್ನೇ ಹನಿಟ್ರ್ಯಾಪ್ ಮಾಡುವ ಪ್ರಯತ್ನ ವಿಫಲಗೊಂಡಿದೆ ಎಂಬ ಸುದ್ದಿಗಳೂ ಹರಿದಾಡುತ್ತಿತ್ತು.
ಕೆಲವು ದಿನಗಳ ಹಿಂದೆ ಸಚಿವರೊಬ್ಬರನ್ನು ಹನಿಟ್ರ್ಯಾಪ್ ಗೆ ಕೆಡವೋ ಪ್ರಯತ್ನ ನಡೆಸಲಾಗಿತ್ತು. ಆದರೆ ಅದು ಯಶಸ್ವಿ ಆಗಿಲ್ಲ. ಹೀಗಿರುವಾಗ ಹನಿಟ್ರ್ಯಾಪ್ ಗೆ ಬಲಿಯಾದವರು ಯಾರು ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಅಧಿಕಾರಸ್ಥ ವ್ಯಕ್ತಿಯನ್ನು ಹನಿಟ್ರ್ಯಾಪ್ ಗೆ ಒಳಪಡಿಸಿದ ಶಕ್ತಿ ಎಂತಹುದು ಎಂಬ ಮಾತುಗಳೂ ವಿಧಾನಸಭೆಯಲ್ಲಿ ಗುರುವಾರ ಅಧಿಕೃತವಾಗಿ ಚರ್ಚೆಗೆ ಬಂದಿತು.
ಸಚಿವ ಕೆ.ಎನ್.ರಾಜಣ್ಣ ಅವರ ವಿರುದ್ಧ ಮಾತ್ರವಲ್ಲ ಸುಮಾರು 48 ಜನರ ವಿರುದ್ಧ ಹನಿಟ್ರ್ಯಾಪ್ ನಡೆಸಲಾಗಿದೆ ಎಂದು ಕೆ.ಎನ್.ರಾಜಣ್ಣ ಅವರು ಗಂಭೀರವಾಗಿ ಆರೋಪಿಸಿದರು. ಅಲ್ಲದೇ ತಾವು ಲಿಖಿತ ರೂಪದಲ್ಲಿ ಗೃಹ ಸಚಿವರಿಗೆ ದೂರು ನೀಡುವುದಾಗಿಯೂ ಘೋಷಿಸಿದರು. ಹನಿಟ್ರ್ಯಾಪ್ ಪ್ರಕರಣವು ಗಂಭೀರವಾಗಿದ್ದು, ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.
ವಿಧಾನಸೌಧದ ಬಳಿ ಪ್ರತಿಕ್ರಿಯೆ ನೀಡಿದ ಅವರು, ಸಚಿವರ ಮೇಲೆ ಹನಿಟ್ರ್ಯಾಪ್ ಪ್ರಯೋಗವಾಗಿದೆ. ಸುಮಾರು 50 ಜನರ ವಿರುದ್ಧ ಯತ್ನಿಸಲಾಗಿದ್ದು, ರಾಜ್ಯ ಸರ್ಕಾರ ಎಸ್ ಐಟಿ ಯಾವುದನ್ನೂ ರಚನೆ ಮಾಡದೇ ನೇರವಾಗಿ ಸಿಬಿಐ ತನಿಖೆಗೆ ವಹಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು. ರಾಜ್ಯ ರಾಜಕಾರಣದ ಇತಿಹಾಸದಲ್ಲೇ ಅದರಲ್ಲೂ ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಇಷ್ಟೊಂದು ಚರ್ಚೆಯಾಗಿಲ್ಲ. ಇದೊಂದು ಗಂಭೀರ ಪ್ರಕರಣವಾಗಿದ್ದು, ನಿವೃತ್ತ ಜಡ್ಜ್ ಅಥವಾ ಎಸ್ ಐಟಿ ತನಿಖೆಯಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಹೀಗಾಗಿ ಸಿಬಿಐಗೆ ವಹಿಸಿ ಸರ್ಕಾರ ಆದೇಶಿಸಲಿ ಎಂದು ಆಗ್ರಹಿಸಿದರು.
ಸಚಿವ ಕೆ.ಎನ್.ರಾಜಣ್ಣ ಅವರು ಸೇರಿದಂತೆ ಅವರ ಪುತ್ರ ಹಾಗೂ ಎಂಎಲ್ ಸಿ ರಾಜೇಂದ್ರ ರಾಜಣ್ಣ ಅವರ ವಿರುದ್ಧವೂ ಹನಿಟ್ರ್ಯಾಪ್ ಯತ್ನಿಸಲಾಗಿದೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.