ಮಧುಗಿರಿ: ಬಂಗಾರದ ಒಡವೆ ಆಸೆಗಾಗಿ ಮಹಿಳೆಯನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 60 ಸಾವಿರ ದಂಡ ವಿಧಿಸಿ 4 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ವಿಧಿಸಿ ಆದೇಶಿಸಿದೆ.
2019 ರ ಜೂನ್ 6 ರಂದು ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಲೇ.ಮೂಡಲಗಿರಿಯಪ್ಪ ಎಂಬುವರ ಪತ್ನಿ ಗಿರಿಜಮ್ಮ ಎಂಬುವರ ಮೈಮೇಲಿದ್ದ ಬಂಗಾರದ ಒಡವೆಯ ಆಸೆಗಾಗಿ ಸಂಬಂಧಿಕಾರದ ಆರೋಪಿಗಳಾದ ಶಿವಕುಮಾರ್ ಮತ್ತು ಮಂಜುನಾಥ್ ಇಬ್ಬರು ಸೇರಿಕೊಂಡು ಮಧುಗಿರಿ ತಾಲ್ಲೂಕು ಗರಣಿ ಗ್ರಾಮದಲ್ಲಿ ಮಟನ್ ಊಟಕ್ಕೆ ಹೋಗಿ ಬರೋಣ ಎಂದು ಗಿರಿಜಮ್ಮ ಅವರನ್ನು ಕಾರಿನಲ್ಲಿ ಕರೆದುಕೊಂಡು ಮಾಯಗೊಂಡನಹಳ್ಳಿ ಗ್ರಾಮದ ಸಮೀಪದ ನಿರ್ಜನ ಪ್ರದೇಶದಲ್ಲಿ ಹಗ್ಗದಿಂದ ಮಹಿಳೆಯ ಕುತ್ತಿಗೆಯನ್ನು ಬಿಗಿದು ಮತ್ತು ಹೊಡೆದು ಕೊಲೆ ಮಾಡಿದ್ದಾರೆ.
ಇಬ್ಬರು ಆರೋಪಿಗಳು ರಂಟವಳಲು ಗ್ರಾಮದ ಪೆಟ್ಟಿಗೆ ಅಂಗಡಿಯಲ್ಲಿ ಡೀಸೆಲ್ ಖರೀದಿ ಮಾಡಿ ಮೃತ ದೇಹವನ್ನು ಪುಲಮಘಟ್ಟ ಗ್ರಾಮದ ರಸ್ತೆಯಲ್ಲಿ ಮೃತ ಮಹಿಳೆಯ ಮೈಮೇಲೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ್ದಾರೆ, ಬಂಗಾರದ ಒಡವೆ ದೋಚಿಕೊಂಡು ಹಾಗೂ ಮೊಬೈಲ್ ನ ಸಿಮ್ ಹೊರ ತೆಗೆದು ಬಿಸಾಡಿದ್ದಾರೆ. ಬಂಗಾರದ ಒಡವೆಗಳನ್ನು ಕೊರಟಗೆರೆ ಪಟ್ಟಣದ ಮುತ್ತೂಟ್ ನಲ್ಲಿ ನಕ್ಲೇಸ್ ಹಾಗೂ ಉಂಗುರ ಅಡವಿಟ್ಟು ಹಾಗೂ ಇನ್ನುಳಿದ ಒಡವೆಗಳನ್ನು ತೋವಿನಕೆರೆ ಗ್ರಾಮದಲ್ಲಿ ಭಾಗ್ಯಲಕ್ಷ್ಮೀ ಜ್ಯೂಯಲರಿ ಅಂಗಡಿಯಲ್ಲಿ ತಾಳಿ ಮತ್ತು ಓಲೆ ಮಾಡಿಕೊಡುವಂತೆ ಒಡವೆಗಳನ್ನು ನೀಡಿದ್ದಾರೆ.
ಬಡವನಹಳ್ಳಿ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಪ್ರಭಾಕರ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನಾಲ್ಕನೇ ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಇಬ್ಬರಿಗೆ 60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಬಿ.ಎಂ.ನಿರಂಜನಮೂರ್ತಿ ವಾದ ಮಂಡಿಸಿದ್ದರು.