ಹುಳಿಯಾರು: ರಾಗಿ ತುಂಬಿದ್ದ ಲಾರಿಯೊಂದು ಆಯ ತಪ್ಪಿ ಟಿವಿಎಸ್ ಮೇಲೆ ಪಲ್ಟಿಯಾದ ಪರಿಣಾಮ ಟಿವಿಎಸ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ಘಟನೆಯಿಂದ ಆಕ್ರೋಶಗೊಂಡ ಜನರು ಹಂಪ್ಸ್ ಹಾಕುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ರಸ್ತೆಗೆ ಅಡ್ಡಲಾಗಿ ಶಾಮಿಯಾನ ಹಾಕಿ ಪ್ರತಿಭಟನೆ ಮಾಡಿದ ಘಟನೆ ಹುಳಿಯಾರು ಹೋಬಳಿಯ ಯಗಚೀಹಳ್ಳಿ ಯಲ್ಲಿ ಬುಧವಾರ ಜರುಗಿದೆ.
ಹುಳಿಯಾರು ನಾಫೆಡ್ ಕೇಂದ್ರದಿಂದ ರಾಗಿ ತುಂಬಿಕೊಂಡು ಶಿರಾ ಗೋಡನ್ ಗೆ ಹೋಗುತ್ತಿದ್ದ ಲಾರಿ ಯಗಚೀಹಳ್ಳಿ ಬಳಿ ಗಾಣದಾಳು ಸೊಸೈಟಿಯಿಂದ ರೇಷನ್ ತೆಗೆದುಕೊಂಡು ತನ್ನೂರಾದ ಕೆ.ಎಸ್.ಪಾಳ್ಯಕ್ಕೆ ಟಿವಿಎಸ್ ನಲ್ಲಿ ಹೋಗುತ್ತಿದ್ದ ಅಮೀರ್ (72) ಅವರ ಮೇಲೆ ಬಿದ್ದಿದೆ, ಪರಿಣಾಮ ಅಮೀರ್ ದೇಹ ಸೇರಿದಂತೆ ಟಿವಿಎಸ್ ಸಹ ಗುರುತೇ ಸಿಗದಂತೆ ನಜ್ಜುಗುಜ್ಜಾಗಿದೆ. ಅಲ್ಲದೆ ಲಾರಿಯಲ್ಲಿ ತುಂಬಿದ್ದ ನೂರಾರು ರಾಗಿ ಚೀಲಗಳು ರಸ್ತೆಯ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಅದೃಷ್ಟವಶಾತ್ ಈ ರಾಗಿ ಚೀಲಗಳು ಮತ್ತಾರ ಪ್ರಾಣಾಪಾಯ ಮಾಡಿಲ್ಲ ಎನ್ನುವುದು ಸಮಾಧನಕ ಸಂಗತಿಯಾಗಿದ್ದರೂ ಜನರು ಭಯ ಭೀತರಾಗುವಷ್ಟು ಭೀಕರವಾದ ಅಪಘಾತವಾಗಿದೆ.
ಚಿಕ್ಕನಾಯಕನಹಳ್ಳಿ ಸರ್ಕಲ್ ಇನ್ಸ್ ಪೆಕ್ಟರ್ ನದಾಫ್ ಹಾಗೂ ಹುಳಿಯಾರು ಪಿಎಸ್ ಐ ಧರ್ಮಾಂಜಿ ಹಾಗೂ ಜಗದೀಶ್ ಸ್ಥಳಕ್ಕೆ ಆಗಮಿಸಿ ಧರಣಿ ಸ್ಥಳದಿಂದಲೇ ಹೈವೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಮತ್ತು ಜನರ ಒತ್ತಾಯವನ್ನು ವಿವರಿಸಿದರು. ಅದಕ್ಕೆ ಗುರುವಾರ ಬೆಳಗ್ಗೆಯೇ ಹಂಪ್ಸ್ ಹಾಕುವ ಭರವಸೆ ನೀಡಿದರು, ಇದಕ್ಕೆ ಪ್ರತಿಯಾಯಿ ಜನರು ನಾಳೆ ಹಂಪ್ಸ್ ಹಾಕಲು ಮುಂದಾಗದಿದ್ದರೆ ಮತ್ತೆ ರಸ್ತೆ ತಡೆ ಮಾಡಬೇಕಾಗುತ್ತದೆಂದು ಎಚ್ಚರಿಸಿ ಧರಣಿ ಹಿಂಪಡೆದರು.