ಕುಣಿಗಲ್: ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಸ್ವಾಮಿ ಗುಡ್ಡ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಎಸೆದು ಹೋಗಿರುವ ಘಟನೆ ಬುಧವಾರ ಸಂಜೆ ಬೆಳಕಿಗೆ ಬಂದಿದೆ.
ಕೊಲೆಯಾದ ವ್ಯಕ್ತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಇಸ್ಲಾಂಪುರ ವಾಸಿ ಅಜರುದ್ದೀನ್ (30) ಎಂದು ಗುರುತಿಸಲಾಗಿದೆ, ಬುಧವಾರ ಸಂಜೆ ರಂಗನಾಥ ಸ್ವಾಮಿ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗೆ ಗುಡ್ಡದ ಸಮೀಪದ ಬಂಡೆಗಳ ಬಳಿ ಕೆಟ್ಟ ವಾಸನೆ ಬರತೊಡಗಿದ್ದ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಕಲ್ಲುಗಳನ್ನೇ ಮೇಲೆ ಹಾಕಿ ಮುಚ್ಚಿ ಹಾಕಿರುವುದು ಕಂಡುಬಂದಿದೆ, ಅರಣ್ಯ ಇಲಾಖೆ ಸಿಬ್ಬಂದಿ ಕುಣಿಗಲ್ ಪೊಲೀಸರಿಗೆ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಕುಣಿಗಲ್ ಪೊಲೀಸರು, ಮೃತ ದೇಹದ ಮಹಜರ್ ನಡೆಸಿ ಮುಂದಿನ ಕ್ರಮಕ್ಕೆ ಬೆಳ್ಳೂರು ಕ್ರಾಸ್ ನ ಚುಂಚನಗಿರಿ ಆಸ್ಪತ್ರೆಗೆ ಸಾಗಿಸಿ ಕಾಣೆಯಾದವರ ಬಗ್ಗೆ ಪರಿಶೀಲನೆ ನಡೆಸಲಾಗಿ ಕೊಲೆಯಾದವನ ವಿವರ ನೆಲಮಂಗಲದಲ್ಲಿ ಕಾಣೆಯಾಗಿರುವ ಪ್ರಕರಣ ಒಂದಕ್ಕೆ ತಾಳೆಯಾಯಿತು.
ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದಾಗ ಸದರಿ ವ್ಯಕ್ತಿಯನ್ನು ಮಾರ್ಚ್ 12 ರಂದು ಗುಂಪು ಒಂದು ಮನೆಯಿಂದ ಕರೆದುಕೊಂಡು ಹೋಗಿದ್ದು, ನಂತರ ಆತ ನಾಪತ್ತೆಯಾಗಿದ್ದ ಎಂದು ನೆಲಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎನ್ನಲಾಗಿದೆ, ಪ್ರಕರಣದ ಜಾಡು ಹಿಡಿದು ತನಿಖೆ ಮುಂದುವರೆಸಿದ ಕುಣಿಗಲ್ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಕೋಟೆ ಪ್ರದೇಶದ ಯುವಕ ಸೇರಿದಂತೆ ಮೂರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ ಎನ್ನಲಾಗಿದೆ.