ಚಿಕ್ಕಮಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ತಂದೆ ತನ್ನ ಆರು ವರ್ಷದ ಮಗಳು ಸೇರಿದಂತೆ ಮೂವರನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ನಡೆದಿದೆ.
ಅತ್ತೆ ಜ್ಯೋತಿ (50), ನಾದಿನಿ ಸಿಂಧು (24) ಹಾಗೂ ಮಗಳು ಮೌಲ್ಯ (6)ಳನ್ನು ಕೊಲೆ ಮಾಡಿ ಆತ್ಮಹತ್ಯೆಮಾಡಿಕೊಂಡ ರತ್ನಾಕರ್ ಗೌಡ (40). ಈತ ಮೂಲತಃ ಕಳಸ ಸಮೀಪದ ಕಿತಲಿಕೊಂಡ ಗ್ರಾಮದ ನಿವಾಸಿ ಸಿಂಧು ಅವರ ಗಂಡ ಅವಿನಾಶ್ (38) ಎಂಬುವರ ಕಾಲಿಗೆ ಗುಂಡು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಾಳೆಹೊನ್ನೂರಿನ ಪೂರ್ಣಪ್ರಜ್ಞಾ ಶಾಲೆಯ ಬಸ್ ಚಾಲಕರಾಗಿ ರತ್ನಾಕರ್ ಕೆಲಸ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಈತ ತನ್ನ ಮಗಳನ್ನು ತಾನೇ ನೋಡಿಕೊಳ್ಳುತ್ತಿದ್ದರು. ಮಗಳು ನಿತ್ಯವೂ ತನ್ನ ತಾಯಿಯನ್ನು ಕೇಳುತ್ತಿದ್ದಳು. ಶಾಲೆಯಲ್ಲಿ ಆಕೆ ಸಹಪಾಠಿಗಳು ಸಹ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದರು ಎನ್ನಲಾಗಿದೆ.
ಹೆಂಡತಿ ಬಿಟ್ಟು ಹೋಗಿದ್ದಕ್ಕೆ ರತ್ನಾಕರ್ ಮನನೊಂದಿದ್ದರು. ಅಲ್ಲದೇ ಮಗಳು ತೊದಲ ನುಡಿಯಿಂದ ಅಮ್ಮನನ್ನು ಆಗಾಗ್ಗೆ ಕೇಳುತ್ತಿದ್ದಳು. ತಾಯಿ ಇಲ್ಲದೆ ಮಗಳನ್ನು ಬೆಳಸುವುದು ಕಷ್ಟವೆಂದು ತಮ್ಮ ಸ್ನೇಹಿತರ ಬಳಿ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.