ಬೆಳಗಾವಿ: ನಗರದಲ್ಲಿ ಪಾರ್ಕಿಂಗ್ ಮಾಡಿದ್ದ ದುಬಾರಿ ಕಾರಿನ ಗ್ಲಾಸ್ ಸರಿಸಿ ಗಾಡಿಯೊಳಗೆ ಇರಿಸಲಾಗಿದ್ದ ಬ್ಯಾಗ್, ಲ್ಯಾಪ್ ಟಾಪ್ ಗಳನ್ನು ಎಗರಿಸುತ್ತಿದ್ದ ಐನಾತಿ ಕಳ್ಳನನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಮಿಳುನಾಡು ಮೂಲದ ದೀನದಯಾಳ (20) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ನೆಹರು ನಗರದಲ್ಲಿ ನಿಲ್ಲಿಸಿದ್ದ ಕಾರಿನಿಂದ ಲ್ಯಾಪ್ ಟಾಪ್ ಕಳುವಾಗಿರುವ ಬಗ್ಗೆ ದೂರು ದಾಖಲಿಸಲಾಗಿತ್ತು. ಪ್ರಕರಣದ ತನಿಖೆಗೆ ಇಳಿದ ಮಾಳಮಾರುತಿ ಠಾಣಾ ಪೊಲೀಸರಿಗೆ ಆರೋಪಿಯ ಗುರುತು ಪತ್ತೆಯಾಗಿದೆ. ಕಳುವಿನಲ್ಲಿ ಆರೋಪಿಗೆ ಆತನ ತಂದೆಯೂ ನೆರವು ಮಾಡಿದ ಬಗ್ಗೆ ತಿಳಿದು ಬಂದಿದ್ದು, ಜಯಶೀಲನಗಾಗಿ ಹುಡುಕಾಟ ಶುರುವಾಗಿದೆ.
ವಿಶೇಷ ತನಿಖಾ ತಂಡ ರಚಿಸಿ ತಮಿಳುನಾಡಿನಲ್ಲಿ ಅವಿತಿದ್ದ ಆರೋಪಿ ದೀನದಯಾಳನನ್ನು ಬೆಳಗಾವಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಆರೋಪಿಯಿಂದ 1.50 ಲಕ್ಷ ರೂ. ಮೌಲ್ಯದ ಪೋನ್, ಐಪಾಡ್ ಮತ್ತು 50 ಸಾವಿರ ಬೆಲೆ ಬಾಳುವ ಆಟೋಸ್ಕೋಪ್ ಹೀಗೆ ಸುಮಾರು 4 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ತಂಡಕ್ಕೆ ನಗರ ಪೊಲೀಸ್ ಆಯುಕ್ತರು ಅಭಿನಂದಿಸಿದ್ದಾರೆ.