ಮೈಸೂರು: ಇತ್ತೀಚೆಗಿನ ದಿನಗಳಲ್ಲಿ ಗುರುವಿನ ಸ್ಥಾನದಲ್ಲಿದ್ದು ಪಾಠ ಮಾಡಬೇಕಾದ ಶಿಕ್ಷಕರೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಪ್ರಕರಣ ಹೆಚ್ಚು ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಗುರು ದೇವೋ ಭವ ಎನ್ನುವ ಬದಲು ಶಿಕ್ಷಕರನ್ನು ಕೂಡ ಅನುಮಾನದ ದೃಷ್ಟಿಯಿಂದ ನೋಡುವ ಪರಿಸ್ಥಿತಿ ಎದುರಾಗುತ್ತಿದೆ.ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ಇಂತಹ ಕೃತ್ಯಗಳಲ್ಲಿ ಭಾಗಿಯಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳದ ಕಾರಣದಿಂದಾಗಿ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುವಂತಾಗಿದೆ. ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳದ ಪ್ರಕರಣಗಳು ಹೆಚ್ಚಾಗಿರುವುದರಿಂದ ಶಿಕ್ಷಣ ಸಂಸ್ಥೆಗಳು ಪುರುಷ ಶಿಕ್ಷಕರನ್ನು ನೌಕರಿಗೆ ನೇಮಕ ಮಾಡಿಕೊಳ್ಳಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇನ್ಯಾರೋ ಕಷ್ಟ ಅನುಭವಿಸುವಂತಾಗಿದೆ. ಬಹಳಷ್ಟು ಕಡೆಗಳಲ್ಲಿ ವಿದ್ಯಾರ್ಥಿನಿಯರು ಭಯದಿಂದ ತಮಗೆ ತೊಂದರೆಯಾದರೂ ಯಾರಿಗೂ ಹೇಳದೆ ಸಹಿಸಿಕೊಂಡು ಹೋಗುತ್ತಿರುವುದೇ ಇಂತಹ ಘಟನೆಗಳು ಆಗಾಗ್ಗೆ ನಡೆಯಲು ಕಾರಣವಾಗುತ್ತಿವೆ.ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದ್ದು, ದೌರ್ಜನ್ಯ ಎಸಗಿದ ಶಿಕ್ಷಕನನ್ನು ಬಂಧಿಸಲಾಗಿದೆ.
ಮೈಸೂರಿನ ವಿಜಯ ನಗರದಲ್ಲಿವ ಅನುದಾನಿತ ಪ್ರೌಢಶಾಲೆಯೊಂದರ ಶಿಕ್ಷಕ ಮೂಲತಃ ತಿ.ನರಸೀಪರ ನಿವಾಸಿ, ತೋಟಗಾರಿಕಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಎಂ.ಶಿವಮೂರ್ತಿ ಎಂಬಾತನೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾದ ಶಿಕ್ಷಕ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಸುಮಾರು ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ದೂರು ನೀಡಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್.ಎಂ.ಶಿವಮೂರ್ತಿ ಕೃತ್ಯದ ಬಗ್ಗೆ ವಿದ್ಯಾರ್ಥಿನಿಯರು ನೀಡಿದ ದೂರನ್ನು ಆಧರಿಸಿ ಶಿಕ್ಷಕಿಯರು ಮುಖ್ಯ ಶಿಕ್ಷಕರ ಗಮನಕ್ಕೆ ತಂದಿದ್ದರೂ ಮೇಲಾಧಿಕಾರಿಗಳ ಗಮನಕ್ಕೆ ತರದೇ ಇದ್ದಿದ್ದರಿಂದ ಮುಖ್ಯ ಶಿಕ್ಷಕ ಮುರಳೀಧರ ರಾವ್ ಎಂಬಾತನ ವಿರುದ್ಧವೂ ದೂರು ದಾಖಲಾಗಿದೆ. ಶಿಕ್ಷಕ ಹೆಚ್.ಎಂ ಶಿವಮೂರ್ತಿಗೆ ಸಹಾಯ ಮಾಡಲು ಹೋದ ಮುಖ್ಯ ಶಿಕ್ಷಕರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ.