ಸ್ಮಾರ್ಟ್ ಜೊತೆಗೆ ತುಮಕೂರು ಕ್ಲೀನ್ ಸಿಟಿ ಮಾಡಿ

ತ್ಯಾಜ್ಯ ವಿಂಗಡಣೆ ಬಗ್ಗೆ ಜನರಿಗೆ ಅರಿವು ಮೂಡಿಸಿ: ಜಸ್ಟೀಸ್ ಸುಭಾಷ್

129

Get real time updates directly on you device, subscribe now.


ತುಮಕೂರು: ಬೆಂಗಳೂರಿಗೆ ಸಮೀಪವಿರುವ ಸ್ಮಾರ್ಟ್ ಸಿಟಿ ತುಮಕೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಯಾಗಿದ್ದು, ಸ್ಮಾರ್ಟ್ ಸಿಟಿ ಗರಿಯ ಜೊತೆಗೆ ಸ್ವಚ್ಛ ತುಮಕೂರು ಎಂಬ ಹೆಗ್ಗಳಿಕೆ ಪಡೆಯುವಂತಾಗಬೇಕು. ಜಿಲ್ಲೆಯ ನಗರ ಪ್ರದೇಶ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ಕಣ್ಣೋಟಕ್ಕೆ ಸ್ವಚ್ಛತೆ ಎಲ್ಲೆಲ್ಲೂ ಕಾಣುವಂತಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಅಧ್ಯಕ್ಷರೂ ಆದಂತಹ ಜಸ್ಟೀಸ್ ಸುಭಾಷ್ ಬಿ. ಆದಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಶೇ.100 ರಷ್ಟು ಕ್ರೋಢೀಕರಿಸಿ, ಹಸಿ ಹಾಗೂ ಒಣ ತ್ಯಾಜ್ಯ ಪ್ರತ್ಯೇಕಿಸಿ ಸಂಸ್ಕರಿಸಬೇಕು. ಒಣ ಹಾಗೂ ಹಸಿ ಕಸ ವಿಂಗಡಣೆ ಕುರಿತು ಜನ ಸಾಮಾನ್ಯರಿಗೆ ಐಇಸಿ ಚಟುವಟಿಕೆಗಳ ಮೂಲಕ ವ್ಯಾಪಕ ಅರಿವು ಮೂಡಿಸಬೇಕು. ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ತರಬೇತಿ ನೀಡಿ ವಾರ್ಡ್ವಾರು ಜವಾಬ್ದಾರಿಯನ್ನು ನೀಡಬೇಕು. ಸ್ವ- ಸಹಾಯ ಸಂಘಗಳು ಮತ್ತು ಸರ್ಕಾರೇತರ ಸ್ಥಳೀಯ ಸಂಘಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಿ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಬೇಕು. ಸಾಧ್ಯವಾದಲ್ಲಿ ಸ್ವಚ್ಛತೆ ಕಾಪಿಟ್ಟುಕೊಳ್ಳುವಂತಹ ಸ್ಥಳೀಯ ಸಂಸ್ಥೆಗಳನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ತುಮಕೂರು ಪಾಲಿಕೆ ಆಯುಕ್ತರು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಎಲ್ಲರೂ ಮೊದಲಿಗೆ ಪರಿಸರ ನಿಯಮಗಳನ್ನು ಓದಿ ತಿಳಿದುಕೊಳ್ಳಬೇಕು. ತ್ಯಾಜ್ಯ ವಿಲೇವಾರಿಗೆ ಕೋಟ್ಯಾಂತರ ರೂ. ಗಳನ್ನು ವ್ಯಯಿಸಲಾಗುತ್ತಿದೆ. ಆದುದರಿಂದ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತುಮಕೂರು ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಬೇಕಾದರೆ ಮೊದಲಿಗೆ ಸ್ವಚ್ಛ ಭಾರತ ಅಭಿಯಾನ ಅಳವಡಿಸಿಕೊಂಡು ಕ್ಲೀನ್ ಸಿಟಿ ಎಂಬ ಹೆಸರು ಪಡೆಯಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರು ಎಲ್ಲೆಂದರಲ್ಲಿ ಅಳವಡಿಸುವ ಬ್ಯಾನರ್, ಪೋಸ್ಟರ್, ಹೋರ್ಡಿಂಗ್ಸ್ಗಳಿಗೆ ಕಡಿವಾಣ ಹಾಕಬೇಕು. ಪಾಲಿಕೆ ವತಿಯಿಂದ ಆಯ್ದ ಜಾಗಗಳಲ್ಲಿ ಎಲೆಕ್ಟ್ರಾನಿಕ್ ಡಿಸ್ಪ್ಲೇ ಜಾಹೀರಾತು ಫಲಕ ಅಳವಡಿಸಿ, ಇದರ ಮೂಲಕ ವಾಣಿಜ್ಯ ಬಳಕೆದಾರರು ಮತ್ತು ಸಾರ್ವಜನಿಕರು ತಮ್ಮ ಜಾಹೀರಾತುಗಳನ್ನು ಪ್ರದರ್ಶಿಸುವ ವ್ಯವಸ್ಥೆಯಾಗಬೇಕು. ಇದರಿಂದ ಸಾರ್ವಜನಿಕ ಸ್ಥಳಗಳ ಅಂದಗೆಡುವುದಿಲ್ಲ. ಅಂತೆಯೇ ಅಕ್ರಮವಾಗಿ ನಿರ್ಮಿಸುವ ಕಟೌಟ್ ಹಾಗೂ ಪ್ರತಿಮೆಗಳಿಗೂ ಸಹ ಕಡಿವಾಣ ಹಾಕಬೇಕು. ಪ್ಲಾಸ್ಟಿಕ್ ಸರಬರಾಜು ಮಾಡುವವರು ಮತ್ತು ಪ್ಲಾಸ್ಟಿಕ್ ಮಾರುವವರಿಗೂ ಸಹ ದುಪ್ಪಟ್ಟು ದಂಡ ವಿಧಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ, ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ.ನಾಯಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳು ಮುಖ್ಯಾಧಿಕಾರಿಗಳು, ಆಯುಕ್ತರು ಇದ್ದರು.

Get real time updates directly on you device, subscribe now.

Comments are closed.

error: Content is protected !!