ತುಮಕೂರು: ಪ್ರಸ್ತುತ ದಿನಮಾನಗಳಲ್ಲಿ ಧನ ಬಲದಿಂದ ಬಿರುದು, ನಾಮಾವಳಿ, ಪ್ರಶಸ್ತಿ, ಸ್ಥಾನಮಾನ ಗಳಿಸಬಹುದು, ಆದರೆ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾ ಯೋಗಿಯಾಗಲು ಸಾಧ್ಯ ಎಂದು ಚಿಕ್ಕಪೇಟೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ರೆಡ್ಡಿ ಜನ ಸಂಘದ ಸಹಯೋಗದಲ್ಲಿ ಗುರುವಾರ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವೇಮನ ಅವರು ಸಾಮಾನ್ಯವಾಗಿ ಹುಟ್ಟಿದರೂ ತಮ್ಮ ಪರಿಶ್ರಮ ಸಾಧನೆಗಳಿಂದ ಮಹಾ ಯೋಗಿ ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಸಾಮಾನ್ಯರಾಗಿದ್ದರೂ ವಾಲ್ಮೀಕಿಯು ಮಹರ್ಷಿಯಾಗಿ, ಅಂಗುಲಿಮಾಲನು ಬೌದ್ಧ ಭಿಕ್ಷುವಾಗಿ, ಆಮ್ರವಾಲಿಯು ನಾರಿಶಕ್ತಿಯಾಗಿ, ಬುದ್ಧನು ವೈರಾಗ್ಯಮೂರ್ತಿಯಾಗಿ ಹೊರ ಹೊಮ್ಮಿದ್ದು, ಅವರ ಬದುಕಿನ ಉತ್ತರಾರ್ಧದ ಸಾಧನೆಗಳಿಂದ, ಇವರು ಸುಸಂಸ್ಕೃತ ಸಮಾಜ ನಿರ್ಮಾಣ, ಸಮಾಜವನ್ನು ಸತ್ಪಥಕ್ಕೆ ತರುವ ಕಾರ್ಯ ಮಾಡುತ್ತಾ, ಸಾಮಾಜಿಕ ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಮಹಾತ್ಮರು ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ , ಜಿಲ್ಲಾ ರೆಡ್ಡಿ ಜನ ಸಂಘದ ಕೆ.ಶ್ರೀನಿವಾಸರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೇಲ್ವಿಚಾರಕ ಸುರೇಶ್ ಕುಮಾರ್, ನಿವೃತ್ತ ಪ್ರಾಂಶುಪಾಲ ಗುರುಮೂರ್ತಿ, ಜಿಲ್ಲಾ ರೆಡ್ಡಿ ಸಂಘದ ಪದಾಧಿಕಾರಿಗಳಾದ ಆರ್.ಶ್ರೀನಿವಾಸ ರೆಡ್ಡಿ, ಬಿ.ಆರ್.ಮಧು, ಕೆ.ಜೆ.ಗೋಪಾಲರೆಡ್ಡಿ, ಎಂ.ಎ.ಶಿವರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ನಿವೃತ್ತ ಪ್ರಾಂಶುಪಾಲ ಜಿ.ಹೆಚ್.ಮಹದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.
Comments are closed.