ಕುಕ್ಕರ್ ಪ್ರಿಯ ಶಾಸಕರಿಗೆ ಜನ ಪಾಠ ಕಲಿಸ್ತಾರೆ

ಅಭಿವೃದ್ಧಿ ಮಾಡದ ಡಾ.ರಂಗನಾಥ್ ಗಿಫ್ಟ್ ಕೊಡ್ತಿದ್ದಾರೆ: ಕೃಷ್ಣಕುಮಾರ್

85

Get real time updates directly on you device, subscribe now.


ಕುಣಿಗಲ್: ಕ್ಷೇತ್ರದಲ್ಲಿ ಕಳೆದ ನಾಲ್ಕುವರೆ ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದ ಶಾಸಕ ಡಾ.ರಂಗನಾಥ್ ಇದೀಗ ಮತ ಯಾಚನೆಗೆ ಜನರ ಮುಂದೆ ಹೋಗಲು ಮುಖವಿಲ್ಲದೆ ಗಿಫ್ಟ್ ಐಟಂ ಮೊರೆ ಹೋಗಿದ್ದಾರೆಂದು ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ ಹೇಳಿದರು.

ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕುವರೆ ವರ್ಷದಲ್ಲಿ ಯಾವುದೇ ಅಭಿವೃದ್ಧಿ ಮಾಡದ ಶಾಸಕರು ಇದೀಗ ಅಭಿವೃದ್ಧಿ ಕೆಲಸ ಮುಂದಿಟ್ಟುಕೊಂಡು ಜನರ ಮುಂದೆ ಹೋಗದೆ ಆ ಉತ್ಸವ, ಈ ಉತ್ಸವ, ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿ ಜನತೆಗೆ ಗಿಫ್ಟ್ ಐಟಂ ಕೊಡುವ ಮೂಲಕ ಆಮೀಷ ಒಡ್ಡಿ ಮತ ಸೆಳೆಯಲು ಮುಂದಾಗಿದ್ದಾರೆ. ತಾಲೂಕಿನ ಜನರು ಪ್ರಜ್ಞಾವಂತರಾಗಿದ್ದು ಇವರ ಅಭಿವೃದ್ಧಿ ರಹಿತ ರಾಜಕಾರಣಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಶಾಸಕರ ಈ ಗಿಫ್ಟ್ ರಾಜಕಾರಣದಿಂದಾಗಿ ಕುಣಿಗಲ್ ತಾಲೂಕಿಗೆ ಕೆಟ್ಟ ಹೆಸರು ಬರುವಂತಾಗಿದೆ. ರಾಜ್ಯ ಮಟ್ಟದಲ್ಲಿ ಸದ್ದು ಮಾಡಿದ ಮಹಾನ್ ಶಾಸಕರನ್ನು ಹೊಂದಿದ್ದ ಕುಣಿಗಲ್ ಕ್ಷೇತ್ರ ಈ ಶಾಸಕರ ನಡೆಯಿಂದ ಕೆಟ್ಟ ಹೆಸರು ಬರುವಂತಾಗಿದೆ. ಅಭಿವೃದ್ಧಿ ಮರೆತು ಕುಕ್ಕರ್ ಹಂಚುವುದರಲ್ಲಿ ನಿರತರಾಗಿರುವ ಕುಕ್ಕರ್ ಪ್ರಿಯ ಶಾಸಕರಿಗೆ ಈ ಬಾರಿ ಕ್ಷೇತ್ರದ ಜನರು ಬುದ್ಧಿ ಕಲಿಸುತ್ತಾರೆ ಎಂದರು.

ವಿಜಯ ಸಂಕಲ್ಪ ಅಭಿಯಾನ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳು ಕೈಗೊಂಡ ಜನಪರ ಅಭಿವೃದ್ಧಿ ಕಾರ್ಯಗಳನ್ನಿಟ್ಟು ಕೊಂಡು ಮತದಾರರಿಂದ ಮತ ಯಾಚಣೆ ಮಾಡಲು ಜನವರಿ 21 ರಿಂದ 29ರ ವರೆಗೆ ತಾಲೂಕಿನ 264 ಬೂತ್ಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತಯಾಚನೆ ಮಾಡಲು ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷರು ಚಾಲನೆ ನೀಡಿದ ನಂತರ ತಾಲೂಕಿನಲ್ಲಿ ಉಸ್ತುವಾರಿ ಸಚಿವರು, ಗೃಹ ಸಚಿವರೂ ಆದ ಆರಗ ಜ್ಞಾನೇಂದ್ರ ಪಟ್ಟಣ ಸೇರಿದಂತೆ ಕೊಡವತ್ತಿ ಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ. ಎಲ್ಲಾ ವರ್ಗದ ಜನತೆಗೆ ಬಿಜೆಪಿ ಸರ್ಕಾರ ನೀಡಿರುವ ಅಭಿವೃದ್ಧಿ ಪರ ಯೋಜನೆ ಮುಂದಿಟ್ಟುಕೊಂಡು ಮತಯಾಚನೆಗೆ ಪಕ್ಷ ಸಿದ್ಧತೆ ಮಾಡುತ್ತಿದೆ. ಸವಲತ್ತು ಪಡೆದ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಾಗುತ್ತದೆ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್, ತಾಲೂಕು ಉಸ್ತುವಾರಿ ವೈ.ಎಚ್.ಹುಚ್ಚಯ್ಯ ಕಾರ್ಯಕ್ರಮ ಕುರಿತು ಮಾತನಾಡಿದರು. ಪ್ರಭಾರಿ ವಿಶ್ವನಾಥ್, ಸಂಚಾಲಕ ಧನುಶ್ ಗಂಗಾಟ್ಕರ್, ಪ್ರಮುಖರಾದ ದೇವರಾಜ, ದಿನೇಶ್, ಅಮರ್, ಮನೋಹರ್ ಗೌಡ, ಸುರೇಶ್, ಕಣ್ಣಪ್ಪ, ಗೋಪಿ, ಕುಮಾರ, ಅನೂಪಕುಮಾರ್, ತಿಮ್ಮೇಗೌಡ, ನರಸಿಂಹ, ರಮೇಶ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!