ಕುಣಿಗಲ್: ತಾಲೂಕಿನ ಅಮೃತೂರಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣೆಗೆ ಮುನ್ನವೆ ಮತದಾರರಿಗೆ ಹಂಚಲು ತಂದಿದ್ದ ಗಿಫ್ಟ್ ಐಟಂ ಸಂಗ್ರಹ ಗೋದಾಮಿನ ಮುಂದೆ ಗುರುವಾರವೂ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ವಾಗ್ವಾದಕ್ಕೆ ಇಳಿದಿದ್ದು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು.
ಗಿಫ್ಟ್ ಐಟಂ ಸಂಗ್ರಹಿಸಿರುವ ಗೋದಾಮಿಗೆ ಬುಧವಾರ ರಾತ್ರಿ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಲಗ್ಗೆ ಇಟ್ಟು ತೆರಿಗೆ ವಂಚನೆ ಬಗ್ಗೆ ಆರೋಪಿಸಿ ಕ್ರಮಕ್ಕೆ ಆಗ್ರಹಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಿಸಿ ಎಲ್ಲಾ ದಾಖಲೆ ಸರಿ ಇದೆ ಎಂದು ಪಟ್ಟು ಹಿಡಿದು ವಾಗ್ವಾದಕ್ಕೆ ಇಳಿದ ಪರಿಣಾಮ ಗೊಂದಲದ ಸ್ಥಿತಿ ಉಂಟಾಗಿತ್ತು, ರಾತ್ರಿಯಾದ್ದರಿಂದ ವಾಣಿಜ್ಯ ತೆರಿಗೆ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿ ತೆರಳಿದ್ದರು. ಜೆಡಿಎಸ್ ಕಾರ್ಯಕರ್ತರು, ಪೊಲೀಸರು ರಾತ್ರಿ ಇಡೀ ಗೋದಾಮಿನ ಹೊರಗೆ ಕಾವಲು ಇದ್ದರು.
ಗುರುವಾರ ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ನೀಡಿದ ದೂರಿನ ಮೇರೆಗೆ ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತ ನಾಗರಾಜ್ ಮತ್ತು ಸಿಬ್ಬಂದಿ ಗೋದಾಮಿನಲ್ಲಿ ಸಂಗ್ರಹಿಸಿದ್ದ ಗಿಫ್ಟ್ ಐಟಂ ಎಣಿಕೆಗೆ ಸಿದ್ಧತೆ ನಡೆಸಿದರು.
ಗೋದಾಮಿನ ಹೊರಗೆ ಸೇರಿದ್ದ ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ನಾಯಕರ ಪರವಾಗಿ ಘೋಷಣೆ ಕೂಗುತ್ತಿದ್ದರು, ಎರಡೂ ಕಡೆಯವರಲ್ಲಿ ಕೆಲವರು ಮದ್ಯಪಾನ ಮಾಡಿ ಬಾಯಿಗೆ ಬಂದಂತೆ ಪರಸ್ಪರ ನಿಂದನೆಗೆ ಇಳಿದಾಗ ಇತರೆ ಕಾರ್ಯಕರ್ತರು ಕೈ ಕೈ ಮಿಲಾಯಿಸಲು ಮುಂದಾದರು. ನಿಯಂತ್ರಿಸಲು ಬಂದ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದರು. ಡಿವೈಎಸ್ಪಿ ಲಕ್ಷ್ಮೀಕಾಂತ, ಸಿಪಿಐ ಅರುಣ್ ಸಾಲಂಕಿ ಮತ್ತು ಸಿಬ್ಬಂದಿ ಮಧ್ಯ ಪ್ರವೇಶಿಸಿ ಎರಡೂ ಕಡೆಯವರನ್ನು ದೂರತಳ್ಳಿ ಪರಿಸ್ಥಿತಿ ನಿಯಂತ್ರಿಸಿದ್ದು ಸಂಯಮದಿಂದ ವರ್ತಿಸುವಂತೆ ಎರಡೂ ಕಡೆಯ ಮುಖಂಡರಿಗೆ ಸೂಚನೆ ನೀಡಿದರು.
ತೆರಿಗೆ ಅಧಿಕಾರಿಗಳು ಗೋದಾಮಿನಲ್ಲಿ ಸಂಗ್ರಹ ಮಾಡಲಾಗಿದ್ದ ಪ್ರತಿಯೊಂದ ಬಾಕ್ಸ್ನಲ್ಲಿರುವ ಸಾಮಾಗ್ರಿ ಹೊರತೆಗೆದು ಎಣಿಕೆ ಕಾರ್ಯ ಮುಂದುವರೆಸಿದ್ದಾರೆ.
Comments are closed.