ವಿದ್ಯಾವಂತನಿಗೆ ಜಗತ್ತಲ್ಲಿ ಹೆಚ್ಚು ಗೌರವ ದೊರೆಯುತ್ತೆ

134

Get real time updates directly on you device, subscribe now.


ತುಮಕೂರು: ರಾಜ ತನ್ನ ದೇಶದಲ್ಲಿ ಮಾತ್ರ ಗೌರವ ಹೊಂದಿರುತ್ತಾನೆ. ಆದರೆ ವಿದ್ಯಾವಂತನಾದ ಜ್ಞಾನಿಯು ಇಡೀ ವಿಶ್ವದಲ್ಲೇ ಗೌರವ ಹೊಂದುವಂತವನಾಗುತ್ತಾನೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ನಗರದ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ತುಮಕೂರಿನ ಕಿಶೋರ ಭಾರತಿ, ಚೈತನ್ಯ ಭಾರತಿ ಮತ್ತು ವಿಕಾಸ ಭಾರತಿ ಕ್ಯಾಂಪಸ್ ಸಭಾಂಗಣಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿ, ವಿದ್ಯಾವಂತ ಜ್ಞಾನಿಯು ನಮ್ಮ ದೇಶದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ತನ್ನ ಜ್ಞಾನಮಟ್ಟಕ್ಕೆ ತಕ್ಕಂತೆ ಗೌರವ ಹೊಂದಿರುತ್ತಾನೆ. ಆದ್ದರಿಂದಲೇ ನ ಹಿ ಜ್ಞಾನೇನ ಸದೃಶಂ ಎಂಬ ಮಾತು ಬಂದಿರುವುದು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಪೋಷಕರು ಶಾಲೆಗಳನ್ನು ಪರಿಶೀಲಿಸಿ, ಅಲ್ಲಿನ ವ್ಯವಸ್ಥೆ ನೋಡಿದ ಬಳಿಕವಷ್ಟೇ ಮಕ್ಕಳನ್ನು ಶಾಲೆಗಳಿಗೆ ದಾಖಲಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಸುಸಜ್ಜಿತ ಸಭಾಂಗಣ ನಿರ್ಮಿಸಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿವೇಕಾನಂದರು ವಿದೇಶದಿಂದ ಮರಳಿದಾಗ ನಮ್ಮ ದೇಶದ ಅಭಿವೃದ್ಧಿಗೆ ತಮ್ಮ ಸಲಹೆ ಏನು ಎಂದು ಕೇಳಿದ ಸಂದರ್ಭದಲ್ಲಿ ಅವರು ಶಿಕ್ಷಣ ಒಂದರಿಂದಲೇ ಅದು ಸಾಧ್ಯ ಎಂದು ಹೇಳಿದ್ದರು. ಇಂದಿನ ಶಿಕ್ಷಣವು ಮೌಲ್ಯ ರಹಿತವಾಗಿದ್ದು, ಅದು ಕೇವಲ ಹೊರಗಡೆ ಹೊಸ ಬಟ್ಟೆ ಧರಿಸುವ ವ್ಯಕ್ತಿಗಳನ್ನು ನಿರ್ಮಾಣ ಮಾಡುವುದರಲ್ಲೇ ನಿರತವಾಗಿದೆ ಎಂದು ವಿಷಾದಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸರ್ಕಾರ ಕೊಡುವ ಸೌಲಭ್ಯಕ್ಕೆ ಕೈ ಚಾಚುವಂತಾಗಿದೆ. ಕೇವಲ ಪ್ರಜೆಗಳ ಉತ್ಪಾದಕರಷ್ಟೇ ನಾವಾಗದೆ ಸ್ವತಂತ್ರವಾದ ಜೀವನ ನಿರ್ವಹಣೆಗೆ ಬೇಕಾದ ಶಿಕ್ಷಣ ಪಡೆದು ನಾವು ಸ್ವಾವಲಂಬಿಗಳಾಗಬೇಕು. ವಿವೇಕಾನಂದರ ಚಿಂತನೆಗಳು ಸಹಕಾರಿ ಹಾಗೂ ಪ್ರೇರಣಾದಾಯಿಯಾಗಿದೆ ಎಂದರು.

ಇಂದಿನ ಯುವ ಪೀಳಿಗೆಗೆ ವಿವೇಕಾನಂದರ ಅಧ್ಯಯನ ಮಾಡುವ ಅನಿವಾರ್ಯ ಇದೆ. ಹಾಗಾಗಿ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿವೇಕಾನಂದರ ಜೀವನ ಮತ್ತು ಸಂದೇಶ ಅಧ್ಯಯನ ಮಾಡುವಂತಾಗಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯವು ತಿಳಿಯುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದ್ದೇನೆ. ಅವರು ಸಹ ಇದಕ್ಕೆ ಅನುಮತಿ ನೀಡಿದ್ದಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಪರಾವಲಂಬನೆ ಬಿಟ್ಟು, ಸರ್ವಶ್ರೇಷ್ಠ ಭಾರತದ ಸ್ವಾವಲಂಬಿಗಳಾದ ಶ್ರೇಷ್ಠ ಪ್ರಜೆಗಳು ನಾವಾಗೋಣ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶೇಷಾದ್ರಿ ಶಿಕ್ಷಣ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೆ ಪಿ. ಕೃಷ್ಣ, ನಮ್ಮ ಸಂಸ್ಥೆಯ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ವಿಭಾಗಗಳ ಸಭಾಂಗಣದ ಉದ್ಘಾಟನೆಯು ಮೂರು ಕಡೆಗಳಲ್ಲಿ ಒಂದೇ ದಿನ ನೆರವೇರಿರುವುದು ಸಂತಸ ತಂದಿದೆ ಎಂದರು.

ತುಮಕೂರಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಶಿಕ್ಷಣ ನೀಡುತ್ತಿದೆ. ಈ ಭವನದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಮ್ಮ ಶಾಲೆಯ ಮತ್ತು ಕಾರ್ಯಕ್ರಮದ ಯಶಸ್ಸು ಪ್ರಾಂಶುಪಾಲರಾದ ನಂದಾರಾಜು ಅವರಿಗೆ ಸಲ್ಲಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷ ಎನ್. ಪಂಡಿತಾರಾಧ್ಯ ಮಾತನಾಡಿ, ನಮ್ಮ ಸಂಸ್ಥೆಯು ಉತ್ತಮ ಹೆಸರು ಸಂಪಾದಿಸಿದ್ದು, ಅದನ್ನು ಉಳಿಸಿ ಬೆಳೆಸುವಲ್ಲಿ ಶಿಕ್ಷಕರು, ಮಕ್ಕಳು ಹಾಗೂ ಪೋಷಕರ ಸಹಕಾರ ಅತ್ಯಂತ ಪ್ರಮುಖವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ನಂದಾರಾಜು ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!