ಪಾವಗಡ: ಪಟ್ಟಣದ ಬಡಾವಣೆಗಳಲ್ಲಿ ಪ್ರತಿನಿತ್ಯ ಕರಡಿಗಳು ಓಡಾಡುತ್ತಿರುವುದನ್ನು ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಗುರುವಾರ ವಿವಿಧ ಸಂಘ, ಸಂಸ್ಥೆಯ ಪದಾಧಿಕಾರಿಗಳು ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಮಾರಮ್ಮನ ದೇಗುಲದ ಬಳಿಯ ವಿದ್ಯಾನಗರ, ರೊಪ್ಪ, ಕೆಇಬಿ ಹಿಂಭಾಗ ಸೇರಿದಂತೆ ವಿವಿಧೆಡೆ ಸಂಜೆಯಾದ ತಕ್ಷಣ ಕರಡಿಗಳು ಓಡಾಡುತ್ತಿವೆ. ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು. ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲೂ ಭಯಪಡುವ ಸ್ಥಿತಿ ಇದೆ. ಜನವಸತಿ ಪ್ರದೇಶದಲ್ಲಿ ಕರಡಿಗಳು ಓಡಾಡುವುದರಿಂದ ಜನರ ಮೇಲೆ ದಾಳಿ ನಡೆಸಿ ಜೀವ ಹಾನಿಯಾಗುವ ಸಂಭವ ಇದೆ ಎಂದು ದೂರಿದರು.
ಶೀಘ್ರವೇ ಅವುಗಳನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಆಟೊ ಚಾಲಕರ ಸಂಘದ ಅಧ್ಯಕ್ಷ ಬೇಕರಿ ನಾಗರಾಜು, ಅರವಿಂದ್ ಕುಮಾರ್, ಸಾಗರ್ ಇದ್ದರು.
Comments are closed.