ತುಮಕೂರು: ಚುನಾವಣೆಗೂ ಮುನ್ನ ರಾಜ್ಯದ ನಾಲ್ಕು ಮೂಲೆಗಳಿಂದಲೂ ಯಾತ್ರೆ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಪಕ್ಷದ ಪ್ರಾಣಾಳಿಕೆ ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ತುಮಕೂರು ವಿವಿ ಮುಂಭಾಗದ ಬಾಯರ್ಸ್ ಕಾಫಿ ಶಾಪ್ ಬಳಿ ತುಮಕೂರು ನಗರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, 9 ದಿನಗಳ ಈ ವಿಜಯ ಸಂಕಲ್ಪ ಅಭಿಯಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಂದು ಲಕ್ಷ ಹೊಸ ಸದಸ್ಯರ ಸೇರ್ಪಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯಕರ್ತರಿಗೆ ಸೂಚಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಒಂದು ಕಡೆ, ನಾನು ತುಮಕೂರಿನಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ಮಿಸ್ ಕಾಲ್ ಕೊಡುವ ಮೂಲಕ ಜನರು ಪಕ್ಷದ ಸದಸ್ಯರಾಗಿ ನೋಂದಣಿಯಾಗುವಂತೆ ಎಲ್ಲಾ ಕಾರ್ಯಕರ್ತರು ಜನರ ಮನವೊಲಿಸಬೇಕು. ಸದಸ್ಯರಾದವರ ಮನೆಗೆ ಸ್ಟಿಕ್ಕರ್ ಅಂಟಿಸುವ ಕೆಲಸ ಮಾಡಬೇಕಾಗುತ್ತದೆ. ಸಂಘಟನೆಯ ಬಲದಿಂದ ಮುಂದಿನ ಚುನಾವಣೆ ಎದುರಿಸಲು ಕಾರ್ಯಕರ್ತರು ಸನ್ನದ್ದರಾಗುವಂತೆ ಮುಖ್ಯಮಂತ್ರಿ ಬಸರಾಜು ಬೊಮ್ಮಾಯಿ ನುಡಿದರು.
ಜನಸಾಮಾನ್ಯರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವ ನಮ್ಮ ಸರಕಾರ ಎಲ್ಲಾ ಮಹಿಳಾ ವರ್ಗವನ್ನು ಗಮನದಲ್ಲಿ ಇಟ್ಟುಕೊಂಡು ಶೌಚಾಲಯ ನಿರ್ಮಾಣ ಮಾಡಲು ಚಿಂತನೆ ನಡೆಸಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಐದು ಲಕ್ಷ ರೂ ಸಾಲ, ಕೂಲಿ ಕಾರ್ಮಿಕರಿಗೆ ವಿಶೇಷ ಒತ್ತು ನೀಡುವುದರ ಜೊತೆಗೆ ದೀನ ದಲಿತರಿಗಾಗಿ ನೂರು ಹಾಸ್ಟೆಲ್, ಅಲ್ಪಸಂಖ್ಯಾತರ ಹಾಸ್ಟೆಲ್ ನಿರ್ಮಾಣ, 5 ಲಕ್ಷ ಮಹಿಳೆಯರು, 5 ಲಕ್ಷ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡಲು ಮುಂದಾಗಿದೆ. ಪ್ರತಿಯೊಂದು ಗ್ರಾಮದಲ್ಲಿ ಶ್ರೀಶಕ್ತಿ ಸಂಘಗಳಿಗೆ ಸ್ವಯಂ ಉದ್ಯೋಗ ಮಾಡುವ ಅವಕಾಶ ಕಲ್ಪಿಸಲಾಗಿದೆ. ಬಡವರಿಗಾಗಿ ಐದು ಲಕ್ಷ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಇದರಲ್ಲಿ ಒಂದು ಲಕ್ಷ ಮನೆಗಳನ್ನು ನಗರದಲ್ಲಿ ವಾಸವಾಗಿರುವ ಬಡವರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಭರವಸೆ ನೀಡಿದರು.
ತುಮಕೂರು ನಗರ ಬಿಜೆಪಿ ಮಂಡಲ ಅಧ್ಯಕ್ಷ ಹನುಮಂತರಾಜು ಮಾತನಾಡಿ, ತುಮಕೂರು ನಗರದಲ್ಲಿ 26ನೇ ವಾರ್ಡ್ನ 157ನೇ ಬೂತ್ನಲ್ಲಿ ಬೂತ್ ಸಂಪರ್ಕ ಅಭಿಯಾನಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. 9 ದಿನಗಳ ಈ ಅಭಿಯಾನದಲ್ಲಿ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗಾಗಿ ಜಾರಿ ಮಾಡಿರುವ ಕಾರ್ಯಕ್ರಮ ತಿಳಿಸುವುದರ ಜೊತೆಗೆ ಪಕ್ಷದ ಸದಸ್ಯರಾಗಲು ಇಚ್ಚೆಯುಳ್ಳವರ ಮೊಬೈಲ್ನಿಂದ ಪಕ್ಷದ ವತಿಯಿಂದ ನೀಡಿರುವ ಮೊಬೈಲ್ ನಂಬರ್ಗೆ ಮಿಸ್ಕಾಲ್ ನೀಡುವ ಮೂಲಕ ಸದಸ್ಯರನ್ನಾಗಿ ನೋಂದಾಯಿಸುವುದು. ಸದಸ್ಯರ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವುದು. ಗೋಡೆ ಬರಹ ಸೇರಿದಂತೆ ಹಲವು ಕಾರ್ಯಕ್ರಮ ಪಕ್ಷದ ನೀಡಿದೆ. ಇವುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಕಟ್ಟುವ ಕೆಲಸವನ್ನು ನಾವೆಲ್ಲರು ಮಾಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ರಾಜೇಶ್ಗೌಡ, ಮಸಾಲೆ ಜಯರಾಂ, ಜೋತಿಗಣೇಶ್, ಎಂಎಲ್ಸಿ ಹಾಗೂ ಜಿಲ್ಲಾ ಉಸ್ತುವಾರಿ ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮಾಜಿ ಎಂಎಲ್ಸಿ ಡಾ.ಹುಲಿನಾಯ್ಕರ್, 26ನೇ ವಾರ್ಡ್ನ ನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ ಇತರರು ಇದ್ದರು.
Comments are closed.