ಕೊರಟಗೆರೆ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಮಹತ್ವದ ಕಾರ್ಯಕ್ರಮವು ಜನರ ಮತ್ತು ನಮ್ಮ ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆಯಾಗಿದೆ. ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ಬಂದು ತಲುಪಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ ಎಂದು ತಹಶೀಲ್ದಾರ್ ನಾಹೀದ ಜಮ್ಜಮ್ ತಿಳಿಸಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಮಾವತ್ತೂರು ಗ್ರಾಪಂ ನ ಮಿಣಸಂದ್ರ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದಿಂದ ಏರ್ಪಡಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ರೈತರಿಗೆ ಹಲವಾರು ಸೌಲಭ್ಯ ಹೊರ ತರುತ್ತಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವೃದ್ಧರಿಗೆ, ವಿಕಲ ಚೇತನರ, ವಿಧವೆಯರ ಪಿಂಚಣಿ ಹಾಗೂ ರೈತರ ಕೃಷಿ ಮತ್ತು ಹೈನುಗಾರಿಕೆಗಳಿಗೆ ಸರ್ಕಾರ ನೀಡುವ ಸವಲತ್ತು ಗ್ರಾಮ ವಾಸ್ತವ್ಯದ ಮೂಲಕ ನೇರವಾಗಿ ಜನರಿಗೆ ತಲುಪಿಸುವುದು ಎಂದರು.
ಮಾವತ್ತೂರು ಗ್ರಾಪಂ ಅಧ್ಯಕ್ಷೆ ಅನುಸೂಯಮ್ಮ ಮಾತನಾಡಿ, ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೆಡೆ ಸೇರಿ ಗ್ರಾಮೀಣ ಭಾಗದ ಜನರ ಮತ್ತು ರೈತರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವ ಮುಖ್ಯ ಗುರಿಯೇ ಗ್ರಾಮ ವಾಸ್ತವ್ಯ, ಇದರ ಸದುಪಯೋಗವನ್ನು ಗ್ರಾಮೀಣ ಭಾಗದ ಜನತೆ ಪಡೆದುಕೊಳ್ಳಿ ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಮಂಜುನಾಥ್, ಭಾಗ್ಯಮ್ಮ, ಹನುಮಂತರಾಯಪ್ಪ, ಕುಮಾರ್, ಕೃಷಿ ಇಲಾಖೆ ನಾಗರಾಜು, ಸಿಡಿಪಿಓ ಅಂಬಿಕಾ, ಪಂಚಾಯತ್ ರಾಜ್ ಇಂಜಿನಿಯರ್ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಮಾದೇವಿ, ಅರಣ್ಯ ಇಲಾಖೆ ಸುರೇಶ, ತೋಟಗಾರಿಕೆ ಗೋವಿಂದರಾಜು, ಮೀನುಗಾರಿಕೆ ಇಲಾಖೆ ಮಹೇಶ್ವರ್, ಎಡಿಎಲ್ಆರ್ ಬಿ.ಸಿ ಮಹೇಶ್, ಗ್ರಾಮ ಲೆಕ್ಕಾಧಿಕಾರಿ ರಂಜಿತಾ, ರಶ್ಮಿ, ಮಧು ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
Comments are closed.