ತುಮಕೂರು: ಬ್ರಿಟಿಷರ ವಿರುದ್ಧ ತ್ಯಾಗ, ಬಲಿದಾನ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಅಸ್ತ್ರವಾಗಿತ್ತು. ಪೂರ್ಣ ಸ್ವರಾಜ್ಯವೂ ಅಹಿಂಸೆಯಿಂದ ಸಿಗುವಂಥದ್ದಲ್ಲ. ಬದಲಿಗೆ, ಹೋರಾಟದ ಯಶಸ್ಸು ಗುಲಾಮಗಿರಿ ಮುಕ್ತ ಭಾರತ ಮಾಡುತ್ತದೆ ಎಂಬುದು ಸುಭಾಷರ ನಿಲುವಾಗಿತ್ತು. ಅಂತೆಯೇ ಹಿಂದೂಸ್ಥಾನವು ಎಂದೂ ಮರೆಯದ, ಬ್ರಿಟಿಷ್ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿದ್ದರು ನೇತಾಜಿ ಎಂದು ವಾಯ್ಸ್ ಆಫ್ ಇಂಡಿಯಾ ಸಾಹಿತ್ಯ ಸರಣಿಯ ಸಂಪಾದಕ ಮತ್ತು ಅಂಕಣಕಾರ ಮಂಜುನಾಥ್ಅಜ್ಜಂಪುರ ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯ ನೇತಾಜಿ ಸುಭಾಷಾಚಂದ್ರ ಬೋಸ್ ಘಟಕ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಆಯೋಜಿಸಿದ್ದ ಸ್ವಾತಂತ್ರ್ಯ ಹೋರಾಟ- ನೇತಾಜಿ ನೇತೃತ್ವ ಕುರಿತ ವಿಶೇಷ ಉಪನ್ಯಾಸ ಕ್ರಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸುಭಾಷಾಚಂದ್ರ ಬೋಸ್ ಅವರ ನೆನಪು ಕೇವಲ ಜಯಂತಿಯ ದಿನವಷ್ಟೇ ಆಗುತ್ತಿದೆ. ಅವರ ಉಘ್ರ ಹೋರಾಟದ ಅಧ್ಯಾಯವನ್ನು ಪಠ್ಯಗಳಲ್ಲಿ ಮುಚ್ಚಿಡಲಾಗಿದೆ. ಇತಿಹಾಸ ದಾಖಲೆಗಳು ಭಾರತ ಸ್ವತಂತ್ರ ಆಗುವಲ್ಲಿ ಬೋಸರು ತಳೆದ ನಿಲುವುಗಳನ್ನು ಸಾರಿ ಹೇಳುತ್ತವೆ ಎಂದರು.
ಭಾರತೀಯರಿಗೆ ಬ್ರಿಟಿಷರ ಅಮಾನವೀಯತೆ ಮತ್ತು ಕ್ರೌರ್ಯದ ಜಾಗೃತಿ ಮೂಡಿಸುವ ಕೆಲಸ ಮಾಡಿದರು ಬೋಸ್. ಸುಭಾಷರ ಪ್ರಬಲ ಹೋರಾಟದ ತೀವ್ರತೆಯೇ ನಾವು ಭಾರತ ತೊರೆಯಲು ಕಾರಣ ಎಂದು ಬ್ರಿಟಿಷ್ ಅಧಿಕಾರಿಗಳು ಹೇಳಿರುವ ಅನೇಕ ಉಲ್ಲೇಖಗಳೂ, ದಾಖಲೆಗಳೂ ಇಂದಿಗೂ ಲಭ್ಯವಿದೆ. ಸುದೀರ್ಘ ಮತ್ತು ಸತ್ವಯುತ ಅಧ್ಯಯನ ಹಾಗೂ ಸಂಶೋಧನೆಯ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟದ ನೈಜ ಇತಿಹಾಸ ತಿಳಿಯಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಹಿದಾ ಜಮ್ಜಮ್ ಮಾತನಾಡಿ, ಜಯಂತಿಗಳಿಂದ ವಿದ್ಯಾರ್ಥಿಗಳು ಬೌದ್ಧಿಕವಾಗಿ ಕೊಂಡೊಯ್ಯುವ ವಿಚಾರಗಳು ಮತ್ತು ಅಂಶಗಳು ಬಹಳಷ್ಟಿವೆ. ಆರ್ಥಿಕ ಸ್ವಾವಲಂಬನೆ ಮತ್ತು ದುಶ್ಚಟ ರಹಿತ ಜೀವನವೇ ವಿದ್ಯಾರ್ಥಿಗಳಿಗೆ ನೈಜ ಸ್ವಾತಂತ್ರ್ಯ ಎಂದು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ. ಮಾತನಾಡಿ, ಅಪ್ರತಿಮ ದೇಶಭಕ್ತಿ ಮತ್ತು ಹೋರಾಟದ ಮನೋಧರ್ಮ ರೂಢಿಸಿಕೊಂಡಿದ್ದ ನೇತಾಜಿ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು ಅಂದು ಭಾರತವನ್ನು ಸ್ವತಂತ್ರವಾಗಿಸಲು ತಳೆದ ಭದ್ರ ನಿಲುವುಗಳಿಂದಲೇ ಇಂದು ನಮ್ಮ ಜೀವನ ಸಾಗುತ್ತಿದೆ. ಅವರ ತ್ಯಾಗ ಸದಾ ಸ್ಮರಣೀಯ ಎಂದರು.
ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ನೇತಾಜಿ ಸುಭಾಷಾಚಂದ್ರ ಬೋಸ್ ಘಟಕದ ಸಂಯೋಜಕ ಡಾ.ರವೀಂದ್ರಕುಮಾರ್.ಬಿ, ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ವಿಲಾಸ್ ಎಂ.ಕಾದ್ರೋಳಕರ ಭಾಗವಹಿಸಿದ್ದರು.
Comments are closed.