ಕುಣಿಗಲ್: ಕಾಂಗ್ರೆಸ್ ಪಕ್ಷವೂ ಸುಳ್ಳು ಆಶ್ವಾಸನೆ ನೀಡುವ ಮೂಲಕ ಜನರನ್ನು ವಂಚಿಸಲೆತ್ನಿಸುತ್ತಿದೆ. ಇದರ ಬಗ್ಗೆ ರಾಜ್ಯದ ಜನರು ಜಾಗೃತರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ತಾಲೂಕಿನ ಅಮೃತೂರಿನಲ್ಲಿ ವಿಜಯಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಪಕ್ಷದ ಸಾಧನೆಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವ ಸಭೆಯಲ್ಲಿ ಮಾತನಾಡಿ, ಮನೆಯ ಯಜಮಾನಿಗೆ ಎರಡು ಸಾವಿರ ರೂ. ಎಂಬ ಘೋಷಣೆ ಕಾಂಗ್ರೆಸ್ ಪಕ್ಷ ಮಾಡಿದೆ.
ಯಜಮಾನಿಗೆ ಎರಡು ಸಾವಿರ ರೂ. ನೀಡಿದ ಮಾತ್ರಕ್ಕೆ ಸಮಗ್ರ ಅಭಿವೃದ್ಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಇದು ಸಾಧ್ಯವೆ, ಕಾಂಗ್ರೆಸ್ ಆಡಳಿತ ಇರೋ ರಾಜ್ಯದಲ್ಲಿ ಉಚಿತ ವಿದ್ಯುತ್, ಮನೆ ಯಜಮಾನಿಗೆ ಎರಡು ಸಾವಿರ ನೀಡಿಲ್ಲ. ಬದಲಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಕರ್ನಾಟಕದಲ್ಲಿ ಇಲ್ಲಸಲ್ಲದ ಆಮೀಷ ನೀಡುತ್ತಿರುವುದು ಖಂಡನೀಯ ಎಂದರು.
ಪರಿಶಿಷ್ಟ ಪಂಗಡದ ಜನತೆಗೆ, ಲಂಬಾಣಿ ವರ್ಗದ ಜನತೆಗೆ ಅವರ ತಾಂಡಗಳನ್ನು ಕಂದಾಯ ಗ್ರಾಮವನ್ನಾಗಿಸಿ ಅವರಿಗೆ ಸೂಕ್ತ ವಸತಿ ಸೌಕರ್ಯ ಕಲ್ಪಿಸಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಸ್ವಾತಂತ್ರ್ಯ ಬಂದಾಗಿನಿಂದ ಅವರಿಗೆ ಅಗತ್ಯ ಸ್ಥಾನಮಾನ ನೀಡಲು ಕಾಂಗ್ರೆಸ್ ವಿಫಲವಾಗಿತ್ತು. ಈಗ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ 55 ಸಾವಿರ ಮಂದಿಗೆ ನಿವೇಶನ ಪತ್ರ ನೀಡಿ, ತಾಂಡಾಗಳನ್ನು ಕಂದಾಯ ಗ್ರಾಮವನ್ನಾಗಿ ಅಭಿವೃದ್ಧಿ ಮಾಡಲು ಪ್ರಧಾನಿ ಮೋದಿಜಿಯವರ ನೇತೃತ್ವದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪ.ಜಾತಿ, ಪ.ಪಂಗಡದ ಸಮಗ್ರ ಅಭಿವೃದ್ಧಿ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಕುಣಿಗಲ್ ತಾಲೂಕಿನಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಈ ಬಾರಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಇಲ್ಲಿ ಕಮಲ ಅರಳಬೇಕು. ಕಾರ್ಯಕರ್ತರು ಕೇಂದ್ರ, ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡಬೇಕೆಂದರು.
ಬಿಜೆಪಿ ಮುಖಂಡ, ಪಿಎಲ್ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ತಾಲೂಕು ಬಿಜೆಪಿ ಉಸ್ತುವಾರಿ ವೈ.ಹೆಚ್.ಹುಚ್ಚಯ್ಯ, ಮಂಡಲ ಅಧ್ಯಕ್ಷ ಬಲರಾಮ, ಯುವ ಬಿಜೆಪಿ ಅಧ್ಯಕ್ಷ ಧನುಷ್, ಎಸ್ಸಿ ಮೋರ್ಚಾ ಅಧ್ಯಕ್ಷ ಶಿವರಾಮಯ್ಯ, ಪ್ರಧಾನ ಕಾರ್ಯದರ್ಶಿ ಲಕ್ಕಣ್ಣ, ಪ್ರಮುಖರಾದ ವೆಂಕಟೇಶ, ಮುನಿ ಸ್ವಾಮಯ್ಯ, ಕೇಶವ, ರಂಗಸ್ವಾಮಿ, ದಿನೇಶ, ಸುರೇಶ, ಪ್ರಕಾಶ ಇತರರು ಇದ್ದರು.
Comments are closed.