ತುಮಕೂರು: ತುಮಕೂರು ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಬಾಬು ಜಗಜೀವನರಾಂ ಭವನ ನಿರ್ಮಾಣ ಕಾಮಗಾರಿ ಆರಂಭ ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆ ಮತ್ತಿತರರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ದಂಡು, ದಲಿತ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಗರದ ಟೌನ್ಹಾಲ್ ವೃತ್ತದಿಂದ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕೆಲ ಕಾಲ ಧರಣಿ ನಡೆಸಿದರು. ಈ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ದಂಡು ಸಂಘಟನೆಯ ಜಿಲ್ಲಾಧ್ಯಕ್ಷ ಕುಮಾರ್.ಎನ್. ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ತುಮಕೂರು ನಗರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕೆಂಬುದು ಹತ್ತಾರು ವರ್ಷಗಳ ಬೇಡಿಕೆಯಾಗಿದೆ. ಆದರೆ ಜಿಲ್ಲಾಡಳಿತ ಮತ್ತು ಸರಕಾರಗಳು ಇದುವರೆಗೂ ಒಂದೊಂದೆ ಸಬೂಬು ಹೇಳಿ ನಿರ್ಲಕ್ಷ ವಹಿಸಲಾಗುತ್ತಿದೆ. 2010 ರಲ್ಲಿ ತುಮಕೂರು ಪಾಲಿಕೆ ಆವರಣದಲ್ಲಿ ಶಂಕು ಸ್ಥಾಪನೆ ನೆರವೇರಿಸಿದ್ದರೂ ತಾಂತ್ರಿಕ ಕಾರಣ ನೀಡಿ ಪ್ರತಿಮೆ ಸ್ಥಾಪಿಸಿಲ್ಲ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ ಪ್ರತಿಮೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.
ದಲಿತ ಸಂರಕ್ಷ ಸಮಿತಿ ಕರ್ನಾಟಕದ ಜಿಲ್ಲಾಧ್ಯಕ್ಷ ಟಿ.ಸಿ.ಸುರೇಶ್ ಮಾತನಾಡಿ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕೆಂಬುದು ದಲಿತರ ಹಲವು ದಿನದ ಬೇಡಿಕೆಯಾಗಿದೆ. ಸರಕಾರಕ್ಕೆ ವರದಿ ಸಲ್ಲಿಸಿ 12 ವರ್ಷ ಕಳೆಯುತ್ತಾ ಬಂದಿದ್ದರೂ ಇದುವರೆಗೂ ಆಳ್ವಿಕೆ ನಡೆಸಿದ ಸರಕಾರಗಳು ಕನಿಷ್ಟ ವರದಿಯನ್ನು ಸದನದಲ್ಲಿ ಚರ್ಚಿಸುವ ಕಾಳಜಿ ತೋರಿಲ್ಲ. ಇದೀಗ ಉಪ ಸಮಿತಿ ಹೆಸರಿನಲ್ಲಿ ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದೆ. ದಲಿತರ 40 ವರ್ಷಗಳ ಬೇಡಿಕೆಯ ಬಗ್ಗೆ ಈ ರೀತಿಯ ನಿರ್ಲಕ್ಷ ಸಲ್ಲದು. ಕೂಡಲೇ ಸರಕಾರ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಹೋರಾಟಗಾರ ಮೆಳೇಕಲ್ಲಹಳ್ಳಿ ಯೋಗೀಶ್ ಮಾತನಾಡಿ, ನಗರದ ಬಾಳನಕಟ್ಟೆಯಲ್ಲಿ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ ಭವನ ನಿರ್ಮಾಣಕ್ಕೆ ಸರಕಾರ ಭೂಮಿ ನೀಡಿದ್ದು, ಜಾಗದ ಬಗ್ಗೆ ಅನಗತ್ಯ ವಿವಾದ ಸೃಷ್ಟಿಸಿ ಮೂರು ವರ್ಷಗಳಿಂದ ಭವನ ನಿರ್ಮಾಣ ಸ್ಥಗಿತಗೊಂಡಿದೆ. ಕೂಡಲೇ ಜಿಲ್ಲಾಡಳಿತ ಬಾಬು ಜಗಜೀವನರಾಂ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಒತ್ತಾಯವಾಗಿದೆ. ಹಾಗೆಯೇ ಎಲ್ಲಾ ಎಸ್ಸಿ, ಎಸ್ಟಿ ಮಕ್ಕಳಿಗೂ ಕಡ್ಡಾಯವಾಗಿ ವಿದ್ಯಾರ್ಥಿ ವೇತನ ನೀಡಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನದ ಸಂಪೂರ್ಣ ಬಳಕೆ, ಅಲ್ಪಸಂಖ್ಯಾತ ವ್ಯಾಪಾರಿಗಳಿಗೆ ಸಂತೆ, ಜಾತ್ರೆ ಮತ್ತಿತರರ ಕಡೆಗಳಲ್ಲಿ ವ್ಯಾಪಾರ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಬೇಕು. ಅಡ್ಡಿ ಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಈ ಸಂಬಂಧ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಂಬೇಡ್ಕರ್ ದಂಡು ಸಂಘಟನೆಯ ಅಲ್ಪಸಂಖ್ಯಾತರ ಘಟಕದ ಶಬ್ಬೀರ್ ಪಾಷ, ಮೆಹಬೂಬ್ ಪಾಷ, ಸೈಯದ್ ಮುಬಾರಕ್, ಖಲೀಲ್ ಪಾಷ, ಟಿ.ಪಾಪಣ್ಣ, ಮಂಜುನಾಥ್, ನಾಗೇಶ್.ಎಂ.ಆರ್, ಕುಮಾರ್.ಎ.ಸಿ, ಸಂತೋಷ, ಮುನಿಯಪ್ಪ, ನಾಸೀರ್ ಪಾಷ, ಫಾರೂಕ್ ಪಾಷ ಇತರರು ಇದ್ದರು.
Comments are closed.