ತುಮಕೂರು: ದೇಶ ಕಂಡ ವಚನ ಭ್ರಷ್ಟ ಪ್ರಧಾನ ಮಂತ್ರಿ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ಮೋದಿಯವರೇ ಸುಳ್ಳು ಹೇಳಿದ್ರೆ ದೇಶ ಉದ್ಧಾರ ಆಗಲ್ಲ. ದೇಶವನ್ನು ಸಾಲದ ಸುಳಿಗೆ ನೂಕಿದ್ದೀರಾ, 153 ಲಕ್ಷ ಕೋಟಿ ಸಾಲ ಇದೆ. ಮೋದಿ ಪ್ರಧಾನ ಮಂತ್ರಿ ಆದ ಮೇಲೆ ನೂರು ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು. ನಗರದ ಗಾಜಿನ ಮನೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ನ ಪ್ರಜಾಧ್ವನಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೋದಿ ಅವರು ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರು, ಅದು ಆಗಿಲಿಲ್ಲ. ಬದಲಾಗಿ ರೈತರು ಇನ್ನು ಹೆಚ್ಚು ಸಾಲಗಾರರಾದರು. ಮೋದಿ ರೈತರಿಗೆ ಭ್ರಮೆ ಹುಟ್ಟಿಸಿದ್ದಾರೆ ಅಷ್ಟೆ ಎಂದರು. ಕಾಂಗ್ರೆಸ್ ಅವಧಿಯಲ್ಲಿನ ಯಾವ ವಸ್ತುಗಳಿಗೆ ಏನು ಬೆಲೆ ಇತ್ತು ಎಂದು ನಾವು ಹೇಳಿದ್ದೇವೆ. ಅದು ಸುಳ್ಳಾ ಹೇಳಿ, ಬೊಮ್ಮಾಯಿ ಸತ್ಯ ಹೇಳಲಿ, ಪೆಟ್ರೋಲ್, ಗ್ಯಾಸ್ ಬೆಲೆ ಎಷ್ಟು ಇದೆ ಹೇಳಿ, ಸುಳ್ಳು ಹೇಳುವ ಬಿಜೆಪಿಯನ್ನು ಕಿತ್ತೊಗೆಯಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿ ಕೋಮು ವಾದಿ ಪಕ್ಷ, ಜನರನ್ನು ನೆಮ್ಮದಿಯಾಗಿ ಬಾಳಲು ಬಿಡಲ್ಲ. ಹಿಂದು ಮುಸ್ಲಿಮರ ಮಧ್ಯೆ ಕಿತ್ತಾಟ ತಂದಿಟ್ರು, ಸಂವಿಧಾನದ ಸಮಪಾಲು, ಸಹಿಷ್ಣುತೆ, ಸಮಾನತೆ ನಂಬಿರೊದು ಕಾಂಗ್ರೆಸ್ ಪಕ್ಷ, ಆದರೆ ಬಿಜೆಪಿ ಸಾಮರಸ್ಯ ಕೆಡಿಸುವ ಕೆಲಸ ಮಾಡುತ್ತಿದೆ. ಯುವಕರನ್ನು ಬಲಿ ಕೊಡಲು ಯಾವುದಾದರು ಧರ್ಮ ಹೇಳುತ್ತಾ, ದ್ವೇಷದ ರಾಜಕಾರಣವನ್ನು ದೇಶದಲ್ಲಿ ಹರಡಿ ಬಿಟ್ಟಿದ್ದೀರಿ. ಯುವಕರು, ಮಹಿಳೆಯರು, ರೈತರು ನೆಮ್ಮದಿಯಾಗಿ ಬದಕಲು ಬಿಡುತ್ತಿಲ್ಲ. ಇಂತ ಬೆಜೆಪಿ ಸರ್ಕಾರಕ್ಕೆ ಪಾಠ ಕಲಿಸಿ ಎಂದರು.
ನಮ್ಮ ಸರ್ಕಾರ ಇದ್ದಾಗ ಕೊಟ್ಟ ಎಲ್ಲಾ ಭರವಸ ಈಡೇರಿಸಿದ್ದೇವೆ. ನಿಮ್ಮ ಭರವಸೆ ಎಷ್ಟು ಈಡೇರಿವೆ ಹೇಳಿ ಬೊಮ್ಮಾಯಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ನಲವತ್ತು ಪರ್ಸೆಂಟ್ ಕಮಿಷನ್ ಬಗ್ಗೆ ಕೆಂಪಣ್ಣ ಹೇಳಿದರು. ಕಾನ್ಸ್ಟೇಬಲ್ಗಳ ಬಳಿಯು ಲಂಚ ಪಡೆಯುತ್ತಾರೆ. ಇನ್ಸ್ಪೆಕ್ಟರ್ಗೆ ಒಳ್ಳೆ ಸ್ಟೇಷನ್ ಬೇಕು ಅಂದ್ರೆ ಲಕ್ಷ ಲಕ್ಷ ಲಂಚ ನೀಡಬೇಕು. ಸ್ಯಾಂಟ್ರೊ ರವಿ ಏನು ಮಾಡಿದ ಎಂದು ಎಲ್ಲರಿಗೂ ಗೊತ್ತಿದೆ. ಅವನ ರಕ್ಷಣೆಗೆ ಬಿಜೆಪಿಯವರೆ ಮುಂದಾಗಿದ್ದಾರೆ. ರಕ್ಷಣೆ ಮಾಡದಿದ್ದರೆ ಇವರ ಬಂಡವಾಳ ಬಯಲಾಗಲಿದೆ. ಸಂತೋಷ್ ಪಾಟೀಲ್ ಸಾವಿಗೆ ಕಾರಣವಾಗಿದ್ದು ಈಶ್ವರಪ್ಪ, ತುಮಕೂರಿನ ದೇವರಾಯನದುರ್ಗದಲ್ಲಿ ಪ್ರಸಾದ್ ಸತ್ತಿದ್ದು ಯಾಕೆ, ಬೆಂಗಳೂರಲ್ಲಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ ಹೇಳಿ ಎಂದು ಪ್ರಶ್ನಿಸಿದರು.
ನಾನು ಸಿಎಂ ಆಗಿದ್ದಾಗ ಏಳು ಕೆಜಿ ಅಕ್ಕಿ ಕೊಟ್ಟೆ, ಬಿಜೆಪಿಯವರು ಐದು ಕೆಜಿಗೆ ಇಳಿಸಿದ್ರು, ಇವರು ಮನೆಯಿಂದ ತಂದು ಕೊಡುತ್ತಾರಾ, ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಕೊಡುತ್ತೇವೆ. ಮೂರು ಲಕ್ಷದ ರವರೆಗೆ ಇದ್ದ ಬಡ್ಡಿ ರಹಿತ ಸಾಲವನ್ನು ನಾವು ಐದು ಲಕ್ಷ ಕೊಡುತ್ತೇವೆ. ಹತ್ತು ಲಕ್ಷ ಇದ್ದ ಧೀರ್ಘಾವದಿ ಸಾಲವನ್ನು ಇಪ್ಪತ್ತು ಲಕ್ಷಕ್ಕೆ ಏರಿಸುತ್ತೇವೆ ಎಂದು ಭರವಸೆ ನೀಡಿದರು. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರದಂತೆ ಜೆಡಿಎಸ್ಗೆ ನಾವು ಬೇಷರತ್ ಬೆಂಬಲ ನೀಡಿ ಕುಮಾರಸ್ವಾಮಿ ಸಿಎಂ ಮಾಡಿದ್ವಿ, ಆದರೆ ಕುಮಾರಸ್ವಾಮಿ ಕಾಂಗ್ರೆಸ್ನವರೆ ಮನೆ ಬಾಗಿಲಿಗೆ ಬಂದ್ರು ಎಂದು ಹೇಳುತ್ತಾರೆ. ನೀವು ಜನಪರ ಸಿಎಂ ಎಂದು ನಿಮ್ಮ ಮನೆ ಬಾಗಿಲಿಗೆ ಬರಲಿಲ್ಲ. ಬಿಜೆಪಿಗೆ ಅಧಿಕಾರ ಸಿಗಬಾರದು ಅಂತ ನಾವು ಬಂದಿದ್ದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಿಜೆಪಿ ಜೊತೆ ಸೇರಿ ಅಧಿಕಾರ ಮಾಡಿದ ಜೆಡಿಎಸ್ ನವರದ್ದು ಸೆಕುರ್ಲ ಪಾರ್ಟಿನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಬಿಜೆಪಿಗೂ ಜೆಡಿಎಸ್ ಏನು ವ್ಯತ್ಯಾಸ ಇಲ್ಲ. ಅಲ್ಪ ಸಂಖ್ಯಾತರನ್ನು ಬಿಜೆಪಿ ಬಹಿರಂಗವಾಗಿ ವಿರೋಧಿಸಿದರೆ ಜೆಇಎಸ್ನವರು ಒಳಗೊಳಗೆ ವಿರೋಧಿಸುತ್ತಾರೆ ಎಂದು ಛೇಡಿಸಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಡಬಲ್ ಇಂಜಿನ್ ಸರ್ಕಾರದಲ್ಲಿ ರೈತರ ಆದಾಯ ದ್ವಿಗುಣ ಮಾಡಿತ್ತೇವೆ ಅಂದ್ರು, ಅದು ಆಗಲಿಲ್ಲ. ಉದ್ಯೋಗ ಕೊಡ್ತೇವೆ ಅಂದ್ರು, ಆದ್ರೆ ಉದ್ಯೋಗವನ್ನೇ ಕಿತ್ತುಕೊಂಡರು. ಅಕೌಂಟ್ ಗೆ ದುಡ್ಡು ಹಾಕುತ್ತೇವೆ ಅಂದ್ರು, ಒಂದು ನಯಾ ಪೈಸೆಯನ್ನೂ ಹಾಕಲಿಲ್ಲ. ರೈತರ ಸಾಲ ಮನ್ನಾ ಮಾಡ್ತೀವಿ ಅಂದ್ರು, ಅದು ಸುಳ್ಳಾಯಿತು. ಅಚ್ಚೆ ದಿನ್ ಬರುತ್ತೇ ಅಂದ್ರೂ, ಯಾವ ಅಚ್ಚೆ ದಿನ್ ಬಂದಿದೆ ಹೇಳಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿ ಈಗ ಪರೀಕ್ಷೆ ಕಾಲ ಬಂದಿದೆ. ಕಾಂಗ್ರೆಸ್ ಸರ್ಕಾರ ತರಲು ಸಂಕಲ್ಪ ಮಾಡಿ ಎಂದು ಕರೆ ನೀಡಿದರು.
ರಾಹುಲ್ ಗಾಂಧಿ ಅವರು ಮೂರುವರೆ ಸಾವಿರ ಕಿಲೋ ಮೀಟರ್ ಭಾರತ್ ಜೋಡೋ ಯಾತ್ರೆಯಲ್ಲಿ ನಡೆದಿದ್ದಾರೆ. ರಾಜ್ಯದ ಜನರ ಉದ್ದಾರಕ್ಕೆ, ಜನರ ಸಮಸ್ಯೆ ಕೇಳಲು, ನೀರು ಒದಗಿಸಲು, ಬದುಕಿನ ಬದಲಾವಣೆಗಾಗಿ ನಾವು ಹೆಜ್ಜೆ ಹಾಕಿದ್ದೇವೆ. ಬಿಜೆಪಿ ಯಾವ ಕೆಲಸ ಮಾಡಿದೆ ಹೇಳಿ, ಬರೀ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದೆ. ರೈತರಿಗೆ ಭೂಮಿ, ಅನೇಕ ಯೋಜನೆ ಕೊಟ್ಟಿರೋದು ಕಾಂಗ್ರೆಸ್, ರಾಜ್ಯದ, ರಾಷ್ಟ್ರದ ಭವಿಷ್ಯಕ್ಕಾಗಿ ಉತ್ತಮ ಹೆಜ್ಜೆ ಇಡಿ, ರಾಜ್ಯದಲ್ಲಿ ಭ್ರಷ್ಟ, ಕಳಂಕಿತ ಸರ್ಕಾರ ಇದೆ. ಕೊಳಕು ಸರ್ಕಾರವನ್ನು ತೊಳೆಯುವ ಸಂಕಲ್ಪ ಮಾಡಿದ್ದೇವೆ. ಅದಕ್ಕೆ ನಿಮ್ಮ ಶಕ್ತಿ ತೋರಿಸಿ ಎಂದು ಕಾರ್ಯಕರ್ತರಿಗೆ ಕರೆ ನಿಡಿದರು.
ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ, ಮನೆಯೊಡತಿಗೆ ತಿಂಗಳಿಗೆ ಎರಡು ಸಾವಿರ ನೀಡಲು ಸಂಕಲ್ಪ ಮಾಡಿದ್ದೇವೆ. ನಾವು ಹೇಳಿದ ಮಾತು ತಪ್ಪಿದರೆ ನಮ್ಮ ರಾಜಕೀಯ ನಿವೃತ್ತಿ ಪಡೆಯುತ್ತೇವೆ. ನಾವು ಎರಡು ಸಾವಿರ ಕೊಡಲು ಚಿಂತಿಸಿದ್ದೇವೆ ಎಂದು ಅಶೋಕ್ ಹೇಳಿದ್ದಾನೆ ಎಂದು ವ್ಯಂಗ್ಯವಾಡಿದರು. ಬರೀ ಸಾಲ ಮಾಡಿದ್ದು ಬಿಜೆಪಿ ಸರ್ಕಾರದ ಸಾಧನೆ, ನಾನು ಮಂತ್ರಿಯಾಗಿದ್ದಾಗ ಪಾವಗಡದಲ್ಲಿ ಮೂರು ಸಾವಿರ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪತ್ತಿ ಮಾಡುವ ಯೋಜನೆ ತಂದೆ. ಬಡವರ ಭೂಮಿಗೆ ಬಾಡಿಗೆ ಬರುವಂತೆ ಮಾಡಿದೆ. ಬಿಜೆಪಿ ಸರ್ಕಾರ ಏನು ಮಾಡಿದೆ ಹೇಳಿ ಎಂದು ಪ್ರಶ್ನಿಸಿದರು. ಶಾಸಕ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಪ್ರಜಾ ಧ್ವನಿ ಮೊಳಗಬೇಕಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಬೇಕಿದೆ. ಸಿದ್ದರಾಮಯ್ಯ ಅವರು ರಾಜ್ಯಕ್ಕೆ ನೀಡಿದ ಯೋಜನೆಗಳನ್ನು ಜನ ಸಮುದಾಯಕ್ಕೆ ಮುಟ್ಟಿಸಬೇಕಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಬೊಮ್ಮಾಯಿ ಅವರೆ ತುಮಕೂರು ಜಿಲ್ಲೆಗೆ ಏನು ಮಾಡಿದ್ದೀರಿ. ಮೋದಿ ಹೆಚ್ಎಎಲ್ ಉದ್ಘಾಟಿಸಿದರು. 2018ಕ್ಕೆ ಹೆಲಿ ಕಾಪ್ಟರ್ ಹಾರುತ್ತೆ ಅಂದರು, ಆದರೆ ಇನ್ನು ಹಾರಿಲ್ಲ. ಹೆಚ್ಎಂಟಿ ಪ್ಯಾಕ್ಟರಿ ಪುನಶ್ಚೇತನ ಮಾಡಲಿಲ್ಲ. ಇಸ್ರೋ ಸಂಸ್ಥೆಗೆ ಜಾಗ ಕೊಟ್ಟರು ಏನು ಆಗಲಿಲ್ಲ. ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಗಿಯುತ್ತಿಲ್ಲ. ಸಾವಿರಾರು ಕೋಟಿ ಲೂಟಿ ಮಾಡಿರೋದು ಬಿಜೆಪಿ ಸರ್ಕಾರ ದ ಸಾಧನೆ ಎಂದರು.
ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಬಿಜೆಪಿಯವರು ಬರಿ ಹಿಂದುಗಳ ಬಗ್ಗೆ ಮಾತನಾಡಿ ಮತ ಸೆಲೆಯುವ ತಂತ್ರ ಮಾಡುತ್ತಿದ್ದಾರೆ. ನಮ್ಮದು ಗಾಂಧಿ ಹಿಂದುತ್ವ, ಬಿಜೆಪಿಯವರದ್ದು ಗೂಡ್ಸೆ ಹಿಂದುತ್ವ, ನಾವು ಅಂಬೇಡ್ಕರ್ ಅವರನ್ನು ಗೌರವಿಸುತ್ತಾ ಇದ್ದೇವೆ. ಆದರೆ ಬಿಜೆಪಿಗೆ ಯಾರ ಬಗ್ಗೆಯೂ ಗೌರವ ಇಲ್ಲ. ಇಂಥ ಬಿಜೆಪಿಯನ್ನು ಮನೆಗೆ ಕಳಿಸಲು ಎಲ್ಲರೂ ಸಜ್ಜಾಗಬೇಕು ಎಂದರು.
ಕಾಂಗ್ರೆಸ್ ರಾಜ್ಯು ಉಸ್ತುವಾರಿ ರಣದೀಪ್ ಸುರ್ಜೆವಾಲ, ಮಯೂರ ಜಯಕುಮಾರ್, ಎಂಎಲ್ಸಿ ಹರಿಪ್ರಸಾದ್, ಮಾಜಿ ಸಚಿವ ಜಯಚಂದ್ರ, ಮುಖಂಎ ಹನುಮಂತಯ್ಯ, ಶಾಸಕ ವೆಂಕಟರಮಣಪ್ಪ, ಮಾಜಿ ಸಚಿವರಾದ ಆಂಜನೇಯ, ಯು.ಟಿ.ಖಾದರ್, ಮಾಜಿ ಸಂಸದ ಚಂದ್ರಪ್ಪ, ಪುಷ್ಪ ಅಮರ್ನಾಥ್, ಉಗ್ರಪ್ಪ, ವೇಣುಗೋಪಾಲ್, ಷಪಿ, ಡಾ.ರಂಗನಾಥ್, ಷಡಕ್ಷರಿ, ರಾಜೇಂದ್ರ, ರಾಣಿ ಸತೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಇನ್ನಿತರರು ಇದ್ದರು.
Comments are closed.