ತುಮಕೂರು: ನಾಡಿನಲ್ಲಿ ಪ್ರೋತ್ಸಾಹದ ಕೊರತೆಯಿಂದ ಜಾನಪದ ಕಲೆಗಳು ನಶಿಸಿ ಹೋಗುತ್ತಿದ್ದು, ಇಂತಹ ಸಂದರ್ಭದಲ್ಲಿ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖೇನ ನಶಿಸಿ ಹೋಗುತ್ತಿರುವ ತಳ ಸಮುದಾಯದ ಕಲೆ ಗುರುತಿಸಿ ಅವುಗಳನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯಕ್ರಮ ರೂಪಿಸಿರುವುದು ನಿಜಕ್ಕೂ ಅಭಿನಂದನಾರ್ಹ ಎಂದು ನಾಡಿನ ಖ್ಯಾತ ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತುಮಕೂರು ಜಿಲ್ಲೆಯಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಐದು ಕಲೆಗಳಾದ ಯಕ್ಷಗಾನ ಬಯಲಾಟ, ಗೊರವರ ಕುಣಿತ, ಕೊಂಬುಕಹಳೆ, ಪಟಕುಣಿತ ಮತ್ತು ಗಣೆವಾದ್ಯ ಕಲೆಗಳ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ಸಂಖ್ಯೆಯಲ್ಲಿದ್ದ ಕಲೆಗಳು ನೂರಾರು ಮಟ್ಟಕ್ಕೆ ಇಳಿದಿರುವುದು ವಿಷಾದನೀಯ. ಸರ್ಕಾರ ರೂಪಿಸಿರುವ ಇಂತಹ ಯೋಜನೆಗಳಿಂದ ಕಲೆ ಉಳಿಸಿ ಬೆಳೆಸುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಆಯ್ಕೆ ಮಾಡಲಾಗಿರುವ ಗೊರವರ ಕುಣಿತ, ಕೊಂಬುಕಹಳೆ, ಮೂಡಲಪಾಯ ಯಕ್ಷಗಾನ, ಪಟಕುಣಿತ ಹಾಗೂ ಗಣೆವಾದ್ಯ ಕಲೆಗಳಿಗೆ ಇನ್ನಷ್ಟು ಪ್ರೋತ್ಸಾಹ ತರಬೇತಿ ಹಾಗೂ ಅವಕಾಶ ಸಿಕ್ಕಿದರೆ ಈ ಕಲೆಗಳನ್ನು ಮುಂದಿನ ದಿನಗಳಿಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ.ಲಕ್ಷ್ಮಣ್ದಾಸ್ ಮಾತನಾಡಿ, ಸರ್ಕಾರ ಈ ಯೋಜನೆಗೆ ತಳ ಸಮುದಾಯದ ಕಲೆಗಳನ್ನು ಗುರುತಿಸಿರುವುದು ಅಭಿನಂದನಾರ್ಹ. ಗ್ರಾಮೀಣ ಪ್ರದೇಶದಲ್ಲಿನ ಈ ಕಲೆಗಳು ಪ್ರೋತ್ಸಾಹ ಮತ್ತು ಅವಕಾಶದ ಕೊರತೆಯಿಂದ ಅವನತಿಯತ್ತ ಸಾಗುತ್ತಿವೆ. ಆಧುನಿಕ ಜೀವನಶೈಲಿಗೆ ಮಾರು ಹೋಗಿರುವ ಯುವ ಜನತೆ ಈ ಕಲೆಗಳತ್ತ ಮುಖ ಮಾಡದಿರುವುದು ಕೂಡ ಕಲೆಯ ಅವನತಿಗೆ ಕಾರಣವಾಗುತ್ತಿದೆ. ಈ ಯೋಜನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ವೇದಿಕೆ ಒದಗಿಸುತ್ತಿರುವುದು ಉತ್ತಮ ಯೋಜನೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಎನ್. ಛಲವಾದಿ ಮಾತನಾಡಿ, ಈ ಯೋಜನೆಯಲ್ಲಿ ಸರ್ಕಾರ ಸ್ಥಳೀಯವಾಗಿ ಅವನತಿಯ ಹಾದಿಯಲ್ಲಿರುವ ಹಾಗೂ ಅವಕಾಶವಂಚಿತ ಕಲೆ ಗುರುತಿಸಿದ್ದು, ಪ್ರತಿ ಜಿಲ್ಲೆಯಲ್ಲಿ ಐದೈದು ಕಲೆ ಗುರುತಿಸಿ, ಪ್ರತಿಕಲೆಗೆ ತಲಾ 10 ಜನ ಶಿಬಿರಾರ್ಥಿಗಳಂತೆ 50 ಜನರನ್ನು ಆಯ್ಕೆ ಮಾಡಿದೆ. ಈ ಯೋಜನೆಯಡಿ ಕಲಿಕಾಸಕ್ತರಿಗೆ ಶಿಷ್ಯವೇತನ ನೀಡಲಾಗುತ್ತದೆ. ಈ ಮೂಲಕ ಪ್ರತಿ ಜಿಲ್ಲೆಯಲ್ಲಿಯೂ ಸಾವಿರಾರು ಯುವ ಜನರಿಗೆ ವಿವಿಧ ಕಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಝೇನ್ ಸಂಸ್ಥೆಯ ಮುಖ್ಯಸ್ಥ ಉಗಮ ಶ್ರೀನಿವಾಸ್, ನಾಟಕಮನೆ ಸಂಸ್ಥೆಯ ಮುಖ್ಯಸ್ಥ ಮಹಾಲಿಂಗು ಹಾಗೂ ಮಲ್ಲಿಕಾರ್ಜುನ ಕೆಂಕೆರೆ, ಕಲಾವಿದ ಬೆಜ್ಜಿಹಳ್ಳಿ ರಾಜಣ್ಣ, ಊರುಕೆರೆ ಚೆಲುವರಾಜು, ಮೇಳೆಹಳ್ಳಿ ದೇವರಾಜು, ಗಂಗಯ್ಯ, ಹುಣಸೇಹಳ್ಳಿ ರಾಜಣ್ಣ, ಪಟಕುಣಿತ ಕಲಾವಿದ ರಾಮಮೂರ್ತಿ ಇತರರು ಇದ್ದರು.
Comments are closed.