ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ

94

Get real time updates directly on you device, subscribe now.


ತುಮಕೂರು: ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ವಿದ್ಯುತ್ ಕಾಮಗಾರಿಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ನಗರದ ಟೌನ್ಹಾಲ್ ವೃತ್ತದಲ್ಲಿ ಜಮಾವಣೆಗೊಂಡ ಅಖಿಲ ಭಾರತ ಕಿಸಾನ್ ಸಭಾ ಕಾರ್ಯಕರ್ತರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ವಿದ್ಯತ್ ಕಾಮಗಾರಿಗಳಿಗೆ ಜಮೀನು ನೀಡಿರುವ ರೈತರ ಭೂಮಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾ ಸಂಚಾಲಕ ಗಿರೀಶ್, ತುಮಕೂರು ಜಿಲ್ಲೆಯ ಹಾರೋನಹಳ್ಳಿ, ಕನೇನಹಳ್ಳಿ, ವಕ್ಕೋಡಿ ಗೊಲ್ಲರಹಟ್ಟಿ, ಕುಪ್ಪೂರು, ಮರಳೇನಹಳ್ಳಿ, ಊರುಕೆರೆ ಗ್ರಾಮದ ಹಲವು ಸರ್ವೆ ನಂಬರ್ಗಳಲ್ಲಿ ಬೃಹತ್ ವಿದ್ಯುತ್ ಕಾಮಗಾರಿಯನ್ನು ಕೆಪಿಟಿಸಿಎಲ್ ವತಿಯಿಂದ ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ಲೈನ್ಗಳ ಬದಲಾವಣೆ ಮಾಡಲಾಗುತ್ತಿದೆ. ರೈತರಿಗೆ ಯಾವುದೇ ಭೂ ಪರಿಹಾರ, ಗಿಡ, ಮರಗಳಿಗೆ ಪರಿಹಾರ ನೀಡದೆ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ತಮ್ಮ ಜೀವನಕ್ಕಾಗಿ ಸಣ್ಣ ಪುಟ್ಟ ಭೂಮಿ ನಂಬಿಕೊಂಡಿದ್ದ ದಲಿತರು, ಹಿಂದುಳಿದ ವರ್ಗದವರು, ಬಡವರಿಗೆ ಭೂಮಿ ಇಲ್ಲದಂತಾಗುತ್ತದೆ. ಅಲ್ಲದೆ ಪ್ರಸ್ತುತ ಈ ಭಾಗದಲ್ಲಿ ಪ್ರತಿ ಕುಂಟೆ ಜಮೀನು 10-15 ಲಕ್ಷ ಬೆಲೆ ಬಾಳುತ್ತಿದ್ದು, ಪರಿಹಾರ ನೀಡದೆ ಭೂಮಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳು ಇದು ಹಳೆಯ ಕಾಮಗಾರಿ ಎಂದು ಹಾರಿಕೆಯ ಉತ್ತರ ನೀಡಿ, ರೈತರನ್ನು ಸಾಗಾಕುತ್ತಿದ್ದಾರೆ ಇದು ಖಂಡನೀಯ ಎಂದರು.

ಈ ಭಾಗದಲ್ಲಿ ನಡೆದಿರುವ ಎತ್ತಿನಹೊಳೆ, ಹೇಮಾವತಿ ನಾಲಾ ಕಾಮಗಾರಿ, ಪವರ್ ಗ್ರಿಡ್, ರಸ್ತೆ, ಕೈಗಾರಿಕಾ ಕಾಮಗಾರಿಗಳಿಗೆ ಪರಿಹಾರ ನೀಡಲಾಗುತ್ತಿದೆ. ಆದರೆ ವಿದ್ಯುತ್ ಕಾಮಗಾರಿಗಳಿಗೆ ಪರಿಹಾರ ನೀಡದೆ ರೈತರನ್ನು ಶೋಷಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಸೂಕ್ತ ಪರಿಹಾರ ನೀಡಿ ಕಾಮಗಾರಿ ನಡೆಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಕೆಪಿಟಿಸಿಎಲ್ಗೆ ಸೂಕ್ತ ಆದೇಶ ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಗಿರೀಶ್ ತಿಳಿಸಿದರು.

ಪ್ರತಿಭಟನೆಯಲ್ಲಿ ಅಖಿಲ ಭಾರತ್ ಕಿಸಾನ್ ಸಭಾ ತಾಲೂಕು ಸಂಚಾಲಕ ಗಂಗರಾಜು, ಮುಖಂಡರಾದ ಅಶ್ವಥನಾರಾಯಣ, ಕಂಬೇಗೌಡ, ಎಐಕೆಎಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ.ಲೋಕೇಶ್, ಮುಖಂಡರಾದ ಕುಪ್ಪೂರು ವೆಂಕಟೇಶ್, ಶ್ರೀನಿವಾಸ್, ಓಂಕಾರಮೂರ್ತಿ ಹಾರೊನಹಳ್ಳಿ, ಗಂಗರಾಜು ಕುಪ್ಪೂರು, ರಾಜಣ್ಣ ಕುಪ್ಪೂರು, ನಾರಾಯಣಪ್ಪ ಕುಪ್ಪೂರು, ಗಂಗಣ್ಣ ಹಾರೋನಹಳ್ಳಿ, ಹೊಸಹಳ್ಳಿ ಗಂಗಣ್ಣ, ಸುರೇಶ್, ಭೀಮಣ್ಣ, ಸಿದ್ದರಾಮಣ್ಣ, ರೇಣುಕಪ್ಪ, ಬಸವರಾಜು, ಉಮೇಶ್, ಮಧುಸೂಧನ್, ಗಂಗಣ್ಣ,ನರಸಿಂಹಮೂರ್ತಿ, ಶಿವರುದ್ರಪ್ಪ, ರಮೇಶ್ ಕನ್ನೇನಹಳ್ಳಿ ಇತರರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!