ತುಮಕೂರು: 18 ವರ್ಷ ತುಂಬಿದ ಅರ್ಹ ಮತದಾರರೆಲ್ಲರೂ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತದಾನ ಮಾಡುವ ಮೂಲಕ ದೇಶದ ಋಣ ತೀರಿಸಬೇಕೆಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಕರೆ ನೀಡಿದರು.
ಜಿಲ್ಲಾಡಳಿತ ಹಾಗೂ ಭಾರತ ಚುನಾವಣಾ ಆಯೋಗದ ಸಹಯೋಗದಲ್ಲಿ ಬುಧವಾರ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿದ್ದು, ಆಯೋಗ ಅಸ್ತಿತ್ವಕ್ಕೆ ಬಂದ ದಿನವಾದ ಜನವರಿ 25 ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಮತದಾರರ ದಿನಾಚರಣೆ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಪ್ರತಿಯೊಬ್ಬ ಮತದಾರನೂ ಮತದಾನದ ಹಕ್ಕನ್ನು ಚಲಾಯಿಸಬೇಕು. ಮತದಾರರ ಪಟ್ಟಿಗೆ ನೋಂದಣಿಯಾದ ಯುವಕರು ಮತ ಚಲಾಯಿಸುವಾಗ ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ. ಯುವ ಜನಾಂಗ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾ ಪ್ರಭುತ್ವ ರಾಷ್ಟ್ರ ನಿರ್ಮಿಸಬೇಕು. ಮತದಾನದ ದಿನದಂದು ಯುವಕರು ತಾವು ಮತ ಚಲಾಯಿಸುವುದರೊಂದಿಗೆ ಸುತ್ತಮುತ್ತಲಿನ ಜನರಿಗೂ ಮತದಾನದ ಮಹತ್ವ ತಿಳಿಸಬೇಕೆಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ, ಅನ್ನದಾನ, ಅಕ್ಷರದಾನ, ರಕ್ತದಾನ, ನೇತ್ರದಾನದಂತೆಯೇ ಮತದಾನವೂ ಶ್ರೇಷ್ಠವಾದದ್ದು, ಹಕ್ಕುಗಳಿಗಾಗಿ ಹೋರಾಟ ಮಾಡುವ ನಾವು ಮತದಾನದ ಕರ್ತವ್ಯ ಮರೆಯುತ್ತಿದ್ದೇವೆ. ಯಾವುದೇ ಆಸೆ-ಆಮಿಷಗಳಿಗೆ ಮತ ಮಾರಾಟ ಮಾಡಿದರೆ, ನಮ್ಮ ತನ ಮಾರಾಟ ಮಾಡಿದಂತಾಗುತ್ತದೆ. ಹಬ್ಬದಂತೆ ಮತದಾನ ದಿನ ಆಚರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ, ಯುವಕರು ಮತದಾನದಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮತದಾನಕ್ಕಿಂತ ಇನ್ನೊಂದು ಇಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಚುನಾವಣಾ ಆಯೋಗದ ಧ್ಯೇಯ ವಾಕ್ಯದಂತೆ ಪ್ರತಿಯೊಬ್ಬರೂ ತಮ್ಮ ಅಮೂಲ್ಯ ಮತ ಚಲಾಯಿಸಬೇಕು. ಮತದಾನದ ಶ್ರೇಷ್ಠತೆ ತಿಳಿದುಕೊಂಡು ಸೂಕ್ತ ಜನಪ್ರತಿನಿಧಿಗಳನ್ನು ಆರಿಸಬೇಕು. ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡಿದರೆ ಮುಂದಿನ 5 ವರ್ಷಗಳ ಕಾಲ ಸರ್ಕಾರವನ್ನು ಪ್ರಶ್ನಿಸುವ ಹಕ್ಕನ್ನು ನಾವು ಕಳೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲೆಯ ತುಮಕೂರು ನಗರ ಮತ್ತು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಿರ್ವಹಣೆ ಮಾಡಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರೌಢಶಾಲಾ ವಿಭಾಗದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕುಣಿಗಲ್ ತಾಲ್ಲೂಕಿನ ರೋಹಿತ್ ಕುಮಾರ್ ಪ್ರಥಮ, ಗುಬ್ಬಿ ತಾಲ್ಲೂಕಿನ ಬಿಂದುಶ್ರೀ ದ್ವಿತೀಯ ಹಾಗೂ ತುಮಕೂರು ತಾಲ್ಲೂಕಿನ ತೃತೀಯ ಬಹುಮಾನ ಪಡೆದುಕೊಂಡರು. ಆಂಗ್ಲ ಪ್ರಬಂಧ ಸ್ಪರ್ಧೆಯಲ್ಲಿ ತುರುವೇಕೆರೆಯ ತನುಶ್ರೀ ಪ್ರಥಮ, ತಿಪಟೂರಿನ ಹಿಮ ಸಿಂಚನ ದ್ವಿತೀಯ, ನೊಣವಿನಕೆರೆಯ ಬೇಬಿ ಶಾಮಿಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ತಹಶೀಲ್ದಾರ್ ಸಿದ್ದೇಶ್, ಜಿ.ಆರ್.ನಟರಾಜ, ಪಾಲಿಕೆ ಆಯುಕ್ತ ಯೋಗಾನಂದ.ಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ನಂಜಯ್ಯ ಜಗದೀಶ್ ಮತ್ತಿತರರು ಹಾಜರಿದ್ದರು.
Comments are closed.