ತುಮಕೂರು: ಯೌವ್ವನ ಆಯಸ್ಸಿನಿಂದ ಹೇಳುವುದಲ್ಲ. ಬದಲಿಗೆ, ನಿನ್ನ ತತ್ವಾದರ್ಶಗಳ ನೆಲೆಗಟ್ಟು ಎಂದು ಸ್ವಾಮಿ ವಿವೇಕಾನಂದರು ಜಗತ್ತಿಗೆ ಸಾರಿ ಹೇಳಿದರು. ವಿವೇಕರ ಚಿಂತನೆಗಳು, ಉಪನಿಷತ್ತುಗಳು ಜಗಕ್ಕೆ ಬಲ ನೀಡುವಂತಾದುವೂ, ಸ್ವಾಮೀಜಿಯ ಚಿಂತನೆಗಳು ಇಂದಿಗೂ ಹರೆಯದ ಹುಡುಗನಾಗಿಯೇ ಉಳಿದಿವೆ. ಅವರ ವಕ್ತಿತ್ವ, ನಡೆ ನುಡಿ, ಧೈರ್ಯ ದಿಟ್ಟತನ ಕ್ರಾಂತಿ ಸೃಷ್ಟಿ ಮಾಡಬಲ್ಲವು ಎಂದು ಗದಗ ಹಾಗೂ ವಿಜಯಪುರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಒಂದು ಚಿಂತನೆ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಸಿ, ಸ್ವಾಮಿ ವಿವೇಕಾನಂದರ ವಿದ್ಯಾರ್ಥಿ ಜೀವನ ಯುವ ಜನತೆಗೊಂದು ಪಥ. ವಿವೇಕರ ಚಿಂತನೆಗಳು ಚಿರನೂತನ. ಯುವಕರು ವಿವೇಕರ ವ್ಯಕ್ತಿತ್ವ, ಚಿಂತನೆ ಅಳವಡಿಸಿಕೊಂಡು ಅದರಂತೆಯೇ ಬದುಕಿದರೆ ನಿಮ್ಮಿಂದ ಭಾರತದ ಭವಿಷ್ಯಉಜ್ವಲವಾಗಲಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸನ್ಯಾಸಿಯಾದ ಸ್ವಾಮಿ ವಿವೇಕಾನಂದರು ಎಲ್ಲಾ ರಂಗದ ವಿಚಾರಧಾರೆಗಳನ್ನು ತಿಳಿದುಕೊಂಡಿದ್ದವರು. ಭವ್ಯ ಭಾರತದ ಕನಸು ಕಂಡವರು. ಅತ್ಯಂತ ನವೀನತೆಯಿಂದ ಕೂಡಿದ ಚಿಂತನೆಗಳು ಮನುಷ್ಯನ ವಿಕಾಸಕ್ಕೆ ಮುಖ್ಯವಾಗಿವೆ. ಸಮಾಜದಲ್ಲಿ ಬದುಕಬೇಕಿದ್ದರೆ ಜ್ಞಾನದೊಂದಿಗೆ ವ್ಯಕ್ತಿತ್ವವೂ ಬಹಳ ಮುಖ್ಯ. ನಾವು ವಿವೇಕಾನಂದರ ಚಿಂತನೆಗಳನ್ನು ಸ್ಫೂರ್ತಿಯಾಗಿ ತೆಗೆದುಕೊಂಡರೆ ಮಾತ್ರ ವಿವೇಕಾನಂದರಲ್ಲಿ ಇದ್ದ ವ್ಯಕ್ತಿತ್ವ, ಧೈರ್ಯ, ಧೀರತನ ನಮ್ಮಲ್ಲಿ ಕಾಣಲು ಸಾಧ್ಯ ಎಂದರು.
ಹೃದ್ರೋಗ ತಜ್ಞೆ ಹಾಗೂ ಸಾಮಾಜಿಕ ಬರಹಗಾರ್ತಿ ಡಾ. ವಿಜಯಲಕ್ಷಿ ಬಾಳೇಕುಂದ್ರಿ ಮಾತನಾಡಿ, ತತ್ವಜ್ಞಾನ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಸಿ.ವಿ.ರಾಮನ್ ವಿಜ್ಞಾನವಾದರೆ, ವಿವೇಕಾನಂದರು ಜ್ಞಾನದ ಸಂಕೇತ. ವಿವೇಕರ ಆಲೋಚನಾ ಶಕ್ತಿ, ಬದುಕು, ಸಮಯ ನಿರ್ವಹಣೆ, ಜ್ಞಾನ ಇಂದಿಗೂ ಅನಂತ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ ವೆಂಕಟೇಶ್ವರಲು ಮಾತನಾಡಿ, ವಿವೇಕಾನಂದರ ಚಿಂತನೆಗಳನ್ನು ನಾವು ಓದಬೇಕು. ಭಾರತದ ಉಜ್ವಲ ಭವಿಷ್ಯ ಹಾಗೂ ಯುವ ಜನತೆಯಲ್ಲಿ ಅಪಾರ ಗೌರವ ಇಟ್ಟುಕೊಂಡ ಮಹಾನ್ ವ್ಯಕ್ತಿ ವಿವೇಕಾನಂದರು. ಅವರ ಆದರ್ಶವನ್ನುಎಲ್ಲರೂ ಪಾಲಿಸಬೇಕು. ಕಾಲೇಜು ಕಾಲ ಕಳೆಯುವ ಬದಲು ಕಲಿಯುವ ಸ್ಥಳವಾಗುವಾಗಬೇಕು. ಇಂದಿನ ಯುವಕರೇ ಮುಂದಿನ ಪೀಳಿಗೆಯ ನಕ್ಷೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಾಹಿದಾ ಜಮ್ಜಮ್, ರಾಮನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಧೀರಾನಂದ ಮಹಾರಾಜ್, ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ.ಚೇತನ್ ಪ್ರತಾಪ್.ಕೆ.ಎನ್, ಸಿಂಡಿಕೇಟ್ ಸದಸ್ಯ ಡಾ. ಕೆ.ರಾಜೀವಲೋಚನ ಭಾಗವಹಿಸಿದ್ದರು.
Comments are closed.