ಆಸೆ, ಆಮಿಷಕ್ಕೆ ಒಳಗಾಗದೆ ಮತ ಚಲಾಯಿಸಿ

108

Get real time updates directly on you device, subscribe now.


ತುಮಕೂರು: ಸಂವಿಧಾನದತ್ತವಾಗಿ ದಕ್ಕಿವ ಮತದಾನದ ಹಕ್ಕನ್ನು ಆಸೆ. ಆಮಿಷಗಳಿಗೆ ಬಲಿಯಾಗಿ ಚಲಾಯಿಸುವುದರಿಂದ ದೇಶದ ಭವಿಷ್ಯ ಕುಂಠಿತವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಎಚ್ಚರಿಕೆ ನೀಡಿದ್ದಾರೆ.

ನಗರದ ಬಟವಾಡಿಯ ಶ್ರೀಕೃಷ್ಣ ವಿದ್ಯಾಸಂಸ್ಥೆ, ಶ್ರೀಕೃಷ್ಣ ಕಾನೂನು ಕಾಲೇಜು ವತಿಯಿಂದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಆಸೆ, ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸುವುದರಿಂದ ಅನರ್ಹರು ಸಂಸತ್ತು, ಶಾಸನ ಸಭೆಗಳಿಗೆ ಆಯ್ಕೆಯಾಗಿ, ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಹಾಗಾಗಿ ಮತದಾರರು ತಮ್ಮ ಮತ ಮಾರಿಕೊಳ್ಳದೆ, ಒಳ್ಳೆಯ ವ್ಯಕ್ತಿಗೆ ಮತ ಚಲಾಯಿಸಿ. ಈ ದೇಶದ ಭವಿಷ್ಯ ಉಜ್ವಲಗೊಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.

ಮತದಾನ ಎಂಬುದು ಈ ದೇಶದ ನಾಗರಿಕರಿಗೆ ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕಾಗಿದೆ. ಈ ಬಗ್ಗೆ ಜನರಿಗೆ, ಅದರಲ್ಲಿಯೂ ಯುವಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರ 2011 ರಿಂದ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಮತದಾನವೆಂಬುದು ಒಂದು ಪವಿತ್ರ ಕಾರ್ಯ. ಈ ಕಾರ್ಯವನ್ನು ನಾವು ಸಮರ್ಪಕವಾಗಿ ಮಾಡಿದಲ್ಲಿ ದೇಶಕ್ಕೆ ಉಜ್ವಲ ಭವಿಷ್ಯವಿದೆ. ನಮ್ಮ ಮಕ್ಕಳು ಮೂಲಭೂತ ಸೌಕರ್ಯಗಳೊಂದಿಗೆ ಸಮಾನ ಅವಕಾಶ ಪಡೆಯಲು ಸಾಧ್ಯವಾಗುತ್ತದೆ. ಹಾಗಾಗಿ 18 ವರ್ಷ ತುಂಬಿದ ಪ್ರತಿ ಯುವಕ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು. ಹಾಗೆಯೇ ಮತಗಟ್ಟೆ ಹೋಗಿ ಯಾವುದೇ ರಾಗ, ದ್ವೇಷವಿಲ್ಲದೆ ಮತಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನ್ಯಾ.ನೂರುನ್ನಿಸಾ ಯುವಜನತೆ ಕರೆ ನೀಡಿದರು.

ಶ್ರೀಕೃಷ್ಣ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಮರಿಚನ್ನಮ್ಮ ಮಾತನಾಡಿ, ಜಮೀನುದಾರರು, ಶ್ರೀಮಂತರು, ತೆರಿಗೆದಾರರಿಗೆ ಮಾತ್ರ ಇದ್ದ ಮತದಾನದ ಹಕ್ಕನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರ ಹೋರಾಟ ನಡೆಸಿ, ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ದೊರೆಯುವಂತೆ ಮಾಡಿದರು. ಒಂದು ಮತ, ಒಂದೇ ಮೌಲ್ಯ ಎಂಬಂತೆ ಬಡವ, ಶ್ರೀಮಂತ, ಮಹಿಳೆ ಪುರುಷ ಎಂಬ ಭೇದ ಭಾವವಿಲ್ಲದೆ ಎಲ್ಲರೂ ಮತದಾನ ಮಾಡುವಂತಾಗಿದೆ. ಅನ್ನದಾನ, ರಕ್ತದಾನ, ದೇಹದಾನದ ರೀತಿಯಲ್ಲಿಯೇ ಮತದಾನವೂ ಒಂದು ಮಹತ್ವದ ಕಾರ್ಯವಾಗಿದೆ. ಇದರ ಮೌಲ್ಯ ಅರಿತು ಎಲ್ಲರೂ ತಪ್ಪದೆ ಮತದಾನ ಮಾಡುವಂತೆ ಸಲಹೆ ನೀಡಿದರು.

ಜಾಗೃತಿ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಗಮಿಸಿದ ವೇಳೆ ಜಾಥಾಕ್ಕೆ ಎಡಿಸಿ ಕೆ.ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ನಟರಾಜ್, ಆಡಳಿತಾಧಿಕಾರಿ ಮೋಹನ್ಕುಮಾರ್, ಶ್ರೀಕೃಷ್ಣ ಎಜುಕೇಷನ್ ಸೊಸೈಟಿಯ ಅಧ್ಯಕ್ಷೆ ಡಾ.ಆರ್.ಲತಾ, ನಿರ್ದೇಶಕಿ ವೀಣಾ.ಆರ್, ಪ್ರಾಂಶುಪಾಲರಾದ ವಿನೇಟ್ ವಿಮಲ, ಸಹಾಯಕ ಪ್ರಾಧ್ಯಾಪಕರಾದ ಶುಭಾ, ಉಮಾಶಂಕರ್, ರಾಜೇಶ್ವರಿ, ಮಂಜುಳ, ಸೋಮಶೇಖರ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!