ತುಮಕೂರು: ನಮ್ಮ ರಾಷ್ಟ್ರದಲ್ಲಿ ಪ್ರಜಾ ಪ್ರಭುತ್ವ ಗಟ್ಟಿಯಾಗಿ ನೆಲೆಯೂರಿದ್ದು, ಇದಕ್ಕೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಅಮಾನಿಕೆರೆ ಆವರಣದಲ್ಲಿ ಟೂಡಾ ವತಿಯಿಂದ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು, ಸ್ವಾತಂತ್ರ್ಯ ಬಂದು 75 ವರ್ಷ ದೇಶವನ್ನು ಚೆನ್ನಾಗಿ ಮುನ್ನಡೆಸುತ್ತಾ ಸಮೃದ್ಧಿಯತ್ತ ಕೊಂಡ್ಯೊಯ್ಯುತ್ತಿದ್ದೇವೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಲು ಅಗತ್ಯ ಇರುವ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದರು.
ಜನಸಾಮಾನ್ಯರ ಬದುಕನ್ನು ಎತ್ತರಿಸಲು ಬೇಕಾದ ಕಾರ್ಯ ಯೋಜನೆಗಳನ್ನು ಸರ್ಕಾರಗಳು ಮಾಡಿವೆ. ಮತದಾನ ಕಡ್ಡಾಯ ಮಾಡಬೇಕು. ಮತದಾನದ ಜಾಗೃತಿ ನಿರ್ಮಾಣ ಮಾಡುವಂತಹ ದಿನ ಆಚರಿಸಿದ್ದೇವೆ. ನಾವೆಲ್ಲರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ದೇಶ ಮತ್ತು ರಾಜ್ಯದಲ್ಲಿ ಯೋಗ್ಯ ಸರ್ಕಾರ ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಈ ರಾಷ್ಟ್ರಕ್ಕೆ ಯಾವ ಸರ್ಕಾರ ಬರಬೇಕು ಎಂಬ ಪ್ರಜ್ಞೆಯಿಂದ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.
ಭಾತೀಯರ ಇತಿಹಾಸದಲ್ಲಿ ಪ್ರಜೆಗಳಿಗೆ ಅಧಿಕಾರ ಕೊಟ್ಟಂತಹ ದಿನ ಇಂದು, ಪ್ರಜೆಗಳು ತಮ್ಮ ಅಧಿಕಾರವನ್ನು ಯಾವ ರೀತಿ ಚಲಾಯಿಸಬೇಕು ಎಂಬ ಪ್ರಜ್ಞೆ ಇಲ್ಲದಿದ್ದರೆ ಈ ಅಧಿಕಾರ ನಿಷ್ಪ್ರಯೋಜಕವಾಗುತ್ತದೆ. ಹಾಗಾಗಿ ನಮ್ಮ ಪ್ರಜ್ಞೆ ಎತ್ತರಗೊಳಿಸುವ ನಿಟ್ಟಿನಲ್ಲಿ ಪ್ರಜೆಯಾಗಿ ನಾವು ಏನು ಮಾಡಬೇಕು ಎಂಬುದನ್ನು ಸದಾ ಕಾಲ ಯೋಚಿಸುತ್ತಿರಬೇಕು ಎಂದರು.
ಟೂಡಾ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಅಮಾನಿಕೆರೆಯಲ್ಲಿ 48 ಅಡಿ ಅಗಲ, 74 ಅಡಿ ಉದ್ದ ಇರುವ ರಾಷ್ಟ್ರ ಧ್ವಜವನ್ನು 216 ಅಡಿ ಎತ್ತರದ ಸ್ತಂಭದಲ್ಲಿ ಹಾರಿಸಲಾಗಿದೆ. ಕಳೆದ ಆಗಸ್ಟ್ 15 ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಪ್ರಪ್ರಥಮ ಬಾರಿಗೆ ಮಾಡಲಾಗಿತ್ತು ಎಂದರು.
ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ದಿನದಂದು ಈ ಧ್ವಜ ಹಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿಶೇಷ ದಿನಗಳಂದು ಅಮಾನಿಕೆರೆಯಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಸರ್ಕಾರದಿಂದ ನಮಗೆ ಅನುಮತಿ ಬೇಕಾಗಿದೆ. ಅನುಮತಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಅನುಮತಿ ದೊರೆತ ಮೇಲೆ ವಿಶೇಷ ದಿನಗಳಂದು ನಿರಂತರವಾಗಿ ಧ್ವಜ ಹಾರಿಸಲು ಪ್ರಯತ್ನಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಪಂ ಸಿಇಓ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ಕುಮಾರ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಟೂಡಾ ಆಯುಕ್ತ ಗೋಪಾಲ್ ಜಾಧವ್, ಹಿರಿಯ ಪತ್ರಕರ್ತ ಎಸ್.ನಾಗಣ್ಣ, ಟೂಡಾ ಸದಸ್ಯರಾದ ಸತ್ಯಮಂಗಲ ಜಗದೀಶ್, ನಾಗರತ್ನಮ್ಮ, ಮಾಯರಂಗಣ್ಣ, ನರಸಿಂಹಮೂರ್ತಿ ಮತ್ತಿತರರು ಇದ್ದರು.
Comments are closed.