ಭಾರತದ ಸಂವಿಧಾನ ಸಮಾನ ಹಕ್ಕು ಕೊಟ್ಟಿದೆ

ಭಾರತದ ಪ್ರಜಾಪ್ರಭುತ್ವ ಇತರೆ ದೇಶಗಳಿಗೆ ಮಾದರಿ: ಆರಗ ಜ್ಞಾನೇಂದ್ರ

148

Get real time updates directly on you device, subscribe now.


ತುಮಕೂರು: ಶ್ರೀಸಾಮಾನ್ಯನಿಗೂ, ಶ್ರೀಮಂತನಿಗೂ ಸರಿಸಮನಾದ ಹಕ್ಕುಗಳು ದೊರೆಯುವಂತೆ ನಮ್ಮ ಸಂವಿಧಾನ ರೂಪಿಸಲಾಗಿದ್ದು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿಯಾಗಿದೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜರೋಹಣ ಮಾಡಿ ಮಾತನಾಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ 26 ಜನವರಿ 1950 ಭಾರತೀಯರಾದ ನಾವೆಲ್ಲರೂ ಅತ್ಯಂತ ಹೆಮ್ಮೆ ಪಡುವಂತಹ ದಿನ, ಶತ ಶತಮಾನಗಳ ಸ್ವಾತಂತ್ರ್ಯದ ಕನಸು ಪರಿಪೂರ್ಣವಾಗಿ ಸಾಕಾರಗೊಂಡ ದಿನ, ಭಾರತ ಸರ್ವತಂತ್ರ ಸ್ವತಂತ್ರವಾದ ದಿನ. ಭಾರತೀಯರ ಸ್ವಾತಂತ್ರ್ಯದ ಕನಸನ್ನು ನನಸಾಗಿಸಿ ಅವರ ಹಕ್ಕು ಮತ್ತು ಕರ್ತವ್ಯಗಳನ್ನು ಮಾನವೀಯ ಮೌಲ್ಯಗಳೊಂದಿಗೆ ಭಾರತೀಯರೆಲ್ಲರಿಗೂ ಸರ್ವ ಸಮ್ಮತವಾಗುವಂತೆ ರೂಪಿಸಿ, ಸಂವಿಧಾನದ ರೂಪದಲ್ಲಿ ಜಾರಿಗೊಳಿಸಿ ತಮಗೆ ತಾವು ಅರ್ಪಿಸಿಕೊಂಡ ದಿನವಾಗಿದೆ ಎಂದರು.

395 ವಿಧಿಗಳು, 8 ಅನುಸೂಚಿಗಳು ಹಾಗೂ 22 ಅಧ್ಯಯಗಳನ್ನೊಳಗೊಂಡ ಭಾರತದ ಸಂವಿಧಾನವು 1950 ಜನವರಿ 26 ರಂದು ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿವರ್ಷ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಇಂತಹ ಮಹಾನ್ ಆಶಯ ಹೊಂದಿರುವ ಬೃಹತ್ ಸಂವಿಧಾನ ರೂಪಿಸಿಕೊಟ್ಟ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ ಕಾರ್ಯ ಚಿರಸ್ಮರಣೀಯ ಎಂದರು.

ಸಂವಿಧಾನ ರಚನಾಕಾರರಲ್ಲಿ ಒಬ್ಬರಾದ ಕರ್ನಾಟಕದ ಹೆಮ್ಮೆಯ ಪುತ್ರ ಬೆನಗಲ್ ನರಸಿಂಹರಾವ್ ಅವರು ಕೂಡಾ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನಕ್ಕೆ ಸೇರಿಸಿದ್ದಾರೆ. ನಮ್ಮ ಸಂವಿಧಾನವು ಅತ್ಯಂತ ವಿಭಿನ್ನವಾಗಿದೆ. ಪ್ರಪಂಚದ ಹಲವಾರು ಸಂವಿಧಾನ ಗಳನ್ನು ಅಧ್ಯಯನ ಮಾಡಿ, ಭಾರತೀಯ ಸಮಾಜಕ್ಕೆ ಪೂರಕವಾಗುವ ಉತ್ತಮ ಅಂಶಗಳನ್ನು ನಮ್ಮ ಸಂವಿಧಾನದಲ್ಲಿ ಆಳವಡಿಸಿಕೊಳ್ಳಲಾಗಿದೆ.

ಆಡಳಿತದ ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಿಗೆ ಜವಾಬ್ದಾರಿಯನ್ನು ಸಂವಿಧಾನದಲ್ಲಿ ನಿಖರವಾಗಿ ಗುರುತಿಸಲಾಗಿದೆ. ಭಾರತ ಸಂವಿಧಾನದ ರಚನೆಗೆ ಕಾಣಿಕೆ ನೀಡಿದ ರಾಜಕೀಯ ಧುರೀಣರು, ರಾಷ್ಟ್ರ ಚಿಂತಕರು, ಪ್ರಜ್ಞಾವಂತರು ಮತ್ತು ಬುದ್ಧಿ ಜೀವಿಗಳನ್ನು ನಾವು ಈ ಸಂದರ್ಭದಲ್ಲಿ ಅತ್ಯಂತ ಗೌರವದಿಂದ ಸ್ಮರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್, ಎಂಎಲ್ ಸಿ ರಾಜೇಂದ್ರ, ಚಿದಾನಂದ ಗೌಡ, ಮೇಯರ್ ಪ್ರಭಾವತಿ ಎಂ.ಸುಧೀಶ್ವರ್ , ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ವಿದ್ಯಾಕುಮಾರಿ, ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!