ಕುಣಿಗಲ್: ಸಂವಿಧಾನದ ಆಶಯಗಳಿಗೆ ಒಳಪಟ್ಟು ದೇಶ ಕೈಗೊಂಡ ಮಹತ್ತರ ಕಾರ್ಯಗಳಿಂದಾಗಿ ಇಂದು ಭಾರತ ದೇಶವನ್ನು ಜಗತ್ತೆ ಗೌರವಿಸುವಂತಾಗಿದೆ ಎಂದು ಶಾಸಕ ಡಾ.ರಂಗನಾಥ್ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಿಗಾಗಿ, ಜನತೆಯ ಸಮಗ್ರ ಅಭ್ಯುದಯಕ್ಕೆ ಹಲವು ಮಹನೀಯರು ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ನೀಡಿದ ಸಂವಿಧಾನದಿಂದಾಗಿ ದೇಶವು ವಿವಿಧತೆಯಲ್ಲಿ ಏಕತೆ ಸಾಧಿಸಿದೆ. ಹಲವು ಸಮಸ್ಯೆ ಪರಿಣಾಮಕಾರಿಯಾಗಿ ಮೆಟ್ಟಿ ನಿಂತು ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ತಾವು ಕಳೆದ ಐದು ವರ್ಷಗಳಿಂದ ಶಾಸಕರಾಗಿ ಜನತೆ ನೀಡಿದ ಸೇವೆಯ ಅವಕಾಶ ಪರಿಣಾಮಕಾರಿಯಾಗಿ ನಿರ್ವಹಿಸಿದ್ದು ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ ಎಂದರು.
ಧ್ವಜಾರೋಹಣೆ ನೇರವೇರಿಸಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಮಹಾ ಬಲೇಶ್ವರ್, ಭಾರತವು ಪ್ರಗತಿದಾಯಕ, ಸಮೃದ್ಧಿ ರಾಷ್ಟ್ರವಾಗಿ ಜಗತ್ತಿನಲ್ಲೆ ಗುರುತಿಸಿಕೊಳ್ಳುತ್ತಿದೆ. ಇದಕ್ಕೆ ದೇಶದ ಪ್ರಜೆಗಳು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಸಹಕಾರ ನೀಡುತ್ತಿರುವುದು ಸಹಕಾರಿಯಾಗಿದೆ. ದೇಶವು ಹಲವು ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಇದಕ್ಕಾಗಿ ವಿವಿಧ ಇಲಾಖೆಗಳು ಶ್ರಮಿಸಿವೆ. ಪಾರದರ್ಶಕ ಆಡಳಿತಕ್ಕೆ ಹೆಚ್ಚು ಒತ್ತು ನೀಡಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಎಲ್ಲಾ ಪ್ರಜೆಗಳು ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಂಡಲ್ಲಿ ದೇಶವು ಮತ್ತಷ್ಟು ಬಲಿಷ್ಠಗೊಂಡು ಉತ್ತಮ ಪ್ರಗತಿಯತ್ತ ದಾಪುಗಾಲಿಡಲು ಸಹಕಾರಿಯಾಗುತ್ತದೆ ಎಂದರು.
ಪುರಸಭೇ ಅಧ್ಯಕ್ಷ ರಂಗಸ್ವಾಮಿ ಮಾತನಾಡಿದರು. ಪಟ್ಟಣದಲ್ಲಿ ಉತ್ತಮ ಸೇವೆ ನೀಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ನವೀನ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ಶಬನಾ ತಬಸ್ಸುಮ್, ಸದಸ್ಯರು ಉಪಸ್ಥಿತರಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಜೋಸ್, ಬಿಇಒ ಬೋರೇಗೌಡ ಇತರರು ಭಾಗಿಯಾಗಿದ್ದು ಶಾಲಾ ಮಕ್ಕಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಿದರು. ಸಾರ್ವಜನಿಕರ ಸಹಭಾಗಿತ್ವದ ಕೊರತೆ ಇದ್ದು, ಕೆಲಸ ಸರ್ಕಾರಿ ಅಧಿಕಾರಿಗಳನ್ನು ಸನ್ಮಾನಿಸಿದ್ದು ವೇದಿಕೆ ಸ್ಥಳದಲ್ಲೆ ಅಸಮಾಧಾನಕ್ಕೆ ಕಾರಣವಾಯಿತು.
Comments are closed.