ಏಕತೆಯ ಮಂತ್ರ ಸಾರಿದ ದೇಶ ಭಾರತ: ಶಂಕರಮೂರ್ತಿ

154

Get real time updates directly on you device, subscribe now.


ತುಮಕೂರು: ಏಕತೆಯ ಮಂತ್ರ ಸಾರಿದ ದೇಶ ನಮ್ಮ ಭಾರತ. ಈ ಮಣ್ಣಿಗೆ, ಸಂಸ್ಕೃತಿಗೆ, ಆಶೋತ್ತರಗಳಿಗೆ, ಜೀವನ ಪದ್ಧತಿಗೆ ಅನುಗುಣವಾಗಿ ರಚನೆಯಾದ ಸಂವಿಧಾನ ನಮ್ಮದು ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮದೇ ಆದಂಥ ರಾಜ್ಯಾಂಗ ವ್ಯವಸ್ಥೆ ಹೊರತರಲು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಒಳಗೊಂಡ ಇನ್ನೂ ಅನೇಕ ಮಹಾ ಪಂಡಿತರು ಅದ್ಭುತವಾದ ಸಂವಿಧಾನ ರಚಿಸಿದರು. ಅರ್ಪಣಾ ಮನೋಭಾವವಿದ್ದ ಸಾವಿರಾರು ಹೋರಾಟಗಾರರು ಕಟ್ಟಿದ ದೇಶವಿದು ಎಂದರು.

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ರಚಿಸಿದ ಸಂವಿಧಾನ ನಮ್ಮದು. ಭಾರತ ಸಾವಿರಾರು ವರ್ಷಗಳಿಂದ ಗುರುವಿನ ಸ್ಥಾನದಲ್ಲಿದೆ. ಇಡೀ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದೆ. ವಿಜ್ಞಾನ, ತಂತ್ರಜ್ಞಾನ, ಸಂಗೀತ, ಸಾಹಿತ್ಯದಲ್ಲಿ ಪ್ರಗತಿಯಿದ್ದ ದೇಶ ನಮ್ಮದು. ಇಡೀ ವಿಶ್ವಕ್ಕೆ ಮಾನಸಿಕ, ದೈಹಿಕ ಆರೋಗ್ಯ ಕಾಪಾಡುವ ಯೋಗ ಪರಿಚಯಿಸಿದ ಶ್ರೀಮಂತ ದೇಶ ನಮ್ಮದು. ಗುಲಾಮಗಿರಿಯಿಂದ ಹೊರಬಂದು ಪ್ರಗತಿಕಂಡು, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಹೊಂದಿದ ನಾಡು ನಮ್ಮದು ಎಂದು ಹೇಳಿದರು.

ಧ್ವಜಾರೋಹಣ ನೆರವೇರಿಸಿದ ತುಮಕೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಡಾ.ಅಬ್ದುಲ್ ಕಲಾಂ ಅವರು ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಬೇಕಾದರೆ ಮತ್ತು ಬಲಿಷ್ಠ ರಾಷ್ಟ್ರವಾಗಬೇಕಾದರೆ ಬದಲಾವಣೆ ಉಂಟು ಮಾಡುವ ಪ್ರಜೆಗಳ ಅವಶ್ಯಕತೆಯಿದೆ ಎಂದು ನಂಬಿದ್ದವರು. ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ. ನಮ್ಮ ಮತವಿಲ್ಲದೆ ಯಾರೂ ಅಧಿಕಾರ ಪಡೆಯಲು ಸಾಧ್ಯವಿಲ್ಲ. ದೇಶವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಉತ್ತಮ ನಾಯಕನನ್ನುಆಯ್ಕೆ ಮಾಡುವ ಹಕ್ಕು ಸಂವಿಧಾನ ನಮಗೆ ಒದಗಿಸಿದೆ ಎಂದರು.
ತುಮಕೂರು ವಿಶ್ವ ವಿದ್ಯಾಲಯದ ಕುಲಸಚಿವೆ ನಹಿದಾ ಜಮ್ ಜಮ್ ಮಾತನಾಡಿ, ಜಗತ್ತಿನಲ್ಲಿರುವ ಎಲ್ಲಾ ಧರ್ಮ ಗ್ರಂಥಗಳು ಪ್ರಜೆಗಳನ್ನು ಬೇರ್ಪಡಿಸಿದರೆ, ಸಂವಿಧಾನ ನಮ್ಮನ್ನು ಒಗ್ಗೂಡಿಸುವ ಏಕೈಕ ಧರ್ಮ ಗ್ರಂಥವಾಗಿದೆ. ದೇಶದ ಗ್ರಂಥ ಸಂವಿಧಾನವೆಂದು ನಾವೆಲ್ಲರೂ ಗೌರವಿಸಿ, ದಿಟ್ಟ ಹೆಜ್ಜೆಯಿಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುಮಕೂರು ವಿಶ್ವ ವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಡಾ.ಪ್ರಸನ್ನ ಕುಮಾರ್.ಕೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಜಕ ಡಾ.ಎ.ಎಂ.ಮಂಜುನಾಥ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!