ಸಾಮ ವೇದ ಸಂಗೀತ ಜ್ಞಾನದ ಭಂಡಾರ

ಸವಿತಾ ಮಹರ್ಷಿ ಜಯಂತ್ಯೋತ್ಸವದಲ್ಲಿ ತಹಶೀಲ್ದಾರ್ ಅಭಿಮತ

187

Get real time updates directly on you device, subscribe now.


ತುಮಕೂರು: ಬ್ರಹ್ಮಜ್ಞಾನ ಹೊಂದಿದ್ದ ಸವಿತಾ ಮಹರ್ಷಿಗಳು ಹಿಂದೂ ಧರ್ಮದ ಆಧಾರ ಸ್ತಂಭಗಳಂತಿರುವ ನಾಲ್ಕು ವೇದಗಳಲ್ಲಿ ಒಂದಾದ ಸಾಮ ವೇದ ರಚಿಸಿದ್ದಾರೆ. ಸಾಮ ಎಂದರೆ ಸಂಗೀತ ಹಾಗೂ ವೇದ ಎಂದರೆ ಜ್ಞಾನ ಎಂಬ ಅರ್ಥ ಇರುವುದರಿಂದ ಸಾಮ ವೇದವು ಸಂಗೀತ ಜ್ಞಾನದ ಭಂಡಾರವಾಗಿದೆ ಎಂದು ತಹಶೀಲ್ದಾರ್ ಸಿದ್ದೇಶ್ ತಿಳಿಸಿದರು.

ನಗರದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತುಮಕೂರು ಮಹಾ ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ತುಮಕೂರು ಜಿಲ್ಲಾ ಸವಿತಾ ಸಮಾಜದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಶ್ರೀ ಸವಿತಾ ಮಹರ್ಷಿ ಅವರ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಸಮಾಜ ಸುಧಾರಣೆಗಾಗಿ ಸಮಾನತೆಯ ಸಂದೇಶ ನೀಡಿದ ವಿವಿಧ ಮಹನೀಯರ ಮತ್ತು ಪುರಾಣ ಪುರುಷರ ಜಯಂತಿ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ. ಸಮಾಜಕ್ಕೆ ಮಹಾನ್ ಕೊಡುಗೆ ನೀಡಿದ ವಿವಿಧ ಮಹನೀಯರ ಜಯಂತ್ಯೋತ್ಸವ ಆಚರಿಸುವ ಮೂಲಕ ಸರ್ಕಾರ ಸಮಾಜದ ಜನರಲ್ಲಿ ಸಾಮರಸ್ಯ ಮತ್ತು ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಸವಿತಾ ಸಮಾಜದಲ್ಲಿ ಆತ್ಮಸ್ಥೈರ್ಯ ತುಂಬಿ ಈ ಸಮಾಜ ಮುಖ್ಯವಾಹಿನಿಗೆ ತರುವ ದಿಸೆಯಲ್ಲಿ ಸವಿತಾ ಸಮಾಜದ ಮೂಲ ಪುರುಷನಾದ ಸವಿತಾ ಮಹರ್ಷಿಯ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಭಾರತದ ಹಲವು ಭಾಗಗಳಲ್ಲಿ ಸವಿತಾ ಸಮಾಜ ಎಂಬ ಹೆಸರಿನಿಂದ ಕರೆಯುವ ಕ್ಷೌರಿಕ ಜನಾಂಗದ ಮೂಲ ಪುರುಷ ಸವಿತಾ ಮಹರ್ಷಿ, ಸವಿತಾ ಎಂಬ ಪದದ ಅರ್ಥ ವಿಷ್ಣು ಸಹಸ್ರನಾಮದ ಪ್ರಕಾರ ಸಕಲ ಜಗತ್ತನ್ನು ರಕ್ಷಿಸಿ ನಡೆಸುವನು ಎಂದರ್ಥ. ಪುರಾಣದ ಪ್ರಕಾರ ಒಮ್ಮೆ ತ್ರಿಮೂರ್ತಿಗಳು ಜೊತೆಗೆ ಯಜ್ಞ ಮಾಡುವಾಗ ಶಿವನ ಅತಿಯಾಗಿ ಬೆಳೆದ ಕೂದಲುಗಳು ಅಗ್ನಿಗೆ ತಾಗಿ ಅಶುಚಿಗೊಳ್ಳುತ್ತವೆ. ಆಗ ಪಕ್ಕದಲ್ಲಿದ್ದ ಪಾರ್ವತಿ ದೇವಿಯ ಸಲಹೆಯಂತೆ ಶಿವನು ತನ್ನ ಬಲಗಣ್ಣಿನಿಂದ ಕ್ಷೌರಿಕರ ಮೂಲ ಪುರುಷರಾದ ಸವಿತಾ ಮಹರ್ಷಿಯನ್ನು ಪರಿಕರಗಳ ಪೆಟ್ಟಿಗೆಯೊಂದಿಗೆ ಸೃಷ್ಟಿ ಮಾಡುತ್ತಾನೆ. ಸವಿತಾ ಮಹರ್ಷಿಯು ಶಿವನ ಅಯಷ್ಕರ್ಮವನ್ನು ಪೂರೈಸಿ ಶಿವನನ್ನು ತೃಪ್ತಿ ಪಡಿಸುತ್ತಾರೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಮಂಜೇಶ್ ಮಾತನಾಡಿ, ಸರ್ಕಾರವು ಪ್ರತಿ ವರ್ಷವು ರಥಸಪ್ತಮಿಯಂದು ಸವಿತಾ ಮಹರ್ಷಿಗಳ ಜಯಂತಿಯನ್ನು ಸರ್ಕಾರದ ಕಾರ್ಯಕ್ರಮವನ್ನಾಗಿ ಆಚರಣೆ ಮಾಡುತ್ತಿರುವುದು ಅಭಿನಂದನೀಯ ಎಂದರು. ಅತ್ಯಂತ ಹಿಂದುಳಿದ ನಮ್ಮ ಜನರನ್ನು ಹಾಗೂ ಜನಾಂಗವನ್ನು ಮುಖ್ಯ ವಾಹಿನಿಗೆ ತರುವಲ್ಲಿ ಇಂತಹ ಆಚರಣೆಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ.ಸುರೇಶ್ಕುಮಾರ್, ಸವಿತಾ ಸಮಾಜದ ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ಖಜಾಂಚಿ ಮೇಲಾಕ್ಷಪ್ಪ, ವಿಭಾಗೀಯ ಕಾರ್ಯದರ್ಶಿ ಎನ್.ಹರೀಶ್, ಎನ್.ನಾಗೇಂದ್ರಕುಮಾರ್, ಸುಬ್ರಮಣ್ಯ, ಟಿ.ಆರ್.ಬಸವರಾಜು, ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಿ.ಆರ್.ರಾಜೇಗೌಡ, ಎನ್.ರಮೇಶ್, ಎಸ್.ಎನ್.ದರ್ಶನ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!