ಟೈರ್ ಗಾಡಿಯೇ ಟ್ರಾಕ್ಟರ್ ಗೆ ಟ್ರೈಲರ್ ಆಯ್ತು

ನಿರುಪಯುಕ್ತ ವಸ್ತು ಬಳಸಿಕೊಂಡ ರೈತ- ಧನಪಾಲ್ ಕಾರ್ಯಕ್ಕೆ ಮೆಚ್ಚುಗೆ

180

Get real time updates directly on you device, subscribe now.


ಕುಣಿಗಲ್: ತಾಲೂಕಿನ ರೈತನೋರ್ವ ನಿರುಪಯುಕ್ತ ಟೈರು ಗಾಡಿಯನ್ನೆ ಟ್ರಾಕ್ಟರ್ ಟ್ರೈಲರನ್ನಾಗಿ ಮಾಡಿಕೊಳ್ಳುವ ಮೂಲಕ ಇತರೆ ರೈತರಿಗೂ ಮಾದರಿಯಾಗಿದ್ದಾನೆ.

ಕೃಷಿ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗುತ್ತಿದ್ದು, ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ರೈತರು ತಮ್ಮ ಹಳೆ, ನಿರುಪಯುಕ್ತ ವಸ್ತುಗಳನ್ನು ಕೃಷಿ ಉಪಕರಣಗಳನ್ನಾಗಿ ಬಳಕೆ ಮಾಡಿಕೊಳ್ಳುತ್ತಾ ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಲು ನಿತ್ಯ ಹೆಣಗಾಡುತ್ತಲೆ ಇರುತ್ತಾರೆ. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾಲುಬಾಯಿ ರೋಗ, ಗಂಟು ರೋಗಕ್ಕೆ ಎತ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿದ್ದು, ರೈತರು ಎತ್ತುಗಳನ್ನು ಅವಲಂಬಿಸಿ ಇಟ್ಟಿದ್ದ ಗ್ರಾಮಾಂತರ ಪ್ರದೇಶದ ಸಾರಿಗೆ ಸಾಧನವಾದ ಎತ್ತಿನಗಾಡಿ, ಟೈರು ಗಾಡಿಗಳನ್ನು ಗುಜರಿಗೆ ಹಾಕುವ ಸ್ಥಿತಿ ಉಂಟಾಗಿದ್ದು 15 ರಿಂದ 30 ಸಾವಿರ ನೀಡಿ ಮಾಡಲಾಗಿದ್ದು ಮರದಗಾಡಿ, ಟೈರು ಗಾಡಿಗಳನ್ನು ಕೇವಲ ಎರಡು, ಮೂರು ಸಾವಿರ ರೂಪಾಯಿಗಳಿಗೆ ಗುಜರಿಗೆ ಹಾಕುವ ಸ್ಥಿತಿ ಬಂದಿದೆ.

ತಾಲೂಕಿನ ಅಮೃತೂರು ಹೋಬಳಿಯ ಚಿನ್ನಹಳ್ಳಿಯ ರೈತ ಧನಪಾಲ್, ಸಣ್ಣ ಹಿಡುವಳಿದಾರನಾಗಿದ್ದು ನಾಲ್ಕು ಎಕರೆ ಜಮೀನು ಹೊಂದಿದ್ದಾರೆ, ಇತ್ತೀಚೆಗೆ ಕೃಷಿ ಉದ್ದೇಶಕ್ಕೆ ಮಿನಿ ಟ್ರಾಕ್ಟರ್ ಖರೀದಿ ಮಾಡಿದ್ದು, ಟ್ರೈಲರ್ಗೆ ಸುಮಾರು ಒಂದುವರೆ ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದು ಹಣಕಾಸು ಹೊಂದಿಸಲಾಗದೆ ತಮ್ಮ ಬಳಿಯೆ ನಿರುಪಯುಕ್ತವಾಗಿದ್ದ ಹಳೆ ಟೈರ್ ಗಾಡಿಗೆ, ತಾವೆ ಸರಳವಾಗಿ ತಾಂತ್ರಿಕತೆ ಅಳವಡಿಸಿಕೊಂಡು ಟೈರ್ ಗಾಡಿಯನ್ನೇ ಟ್ರೈಲರ್ ಆಗಿ ಪರಿವರ್ತಿಸಿದ್ದಾರೆ. ಇದರಿಂದ ಅವರಿಗೆ ಹೆಚ್ಚಿನ ವೆಚ್ಚವಾಗದೆ ಇರುವ ನಿರುಪಯುಕ್ತ ವಸ್ತುವನ್ನೆ ಸದ್ಬಳಕೆ ಮಾಡಿಕೊಂಡಿದ್ದು ಕಸದಿಂದ ರಸ ತೆಗೆದಂತಾಗಿದೆ. ಪಟ್ಟಣಕ್ಕೆ ಆಗಮಿಸಿದ್ದ ರೈತನ ಟ್ರಾಕ್ಟರ್, ಟ್ರೈಲರ್ ಕಂಡು ಇತರೆ ರೈತರು ಕುತೂಹಲ ತಡೆಯಲಾರದೆ ರೈತನು ಅಳವಡಿಸಿಕೊಂಡ ತಂತ್ರಜ್ಞಾನ ವೀಕ್ಷಿಸಿ ತಾವು ಈ ಪ್ರಯತ್ನಕ್ಕೆ ಮುಂದಾಗಬಹುದು ಎಂದಿದ್ದಾರೆ.

ರೈತ ಧನಪಾಲ್ ಮಾತನಾಡಿ, ಕೃಷಿ ಲಾಭದಾಯಕ ಮಾಡಲು ವೆಚ್ಚ ಕಡಿಮೆ ಮಾಡಬೇಕು. ಟ್ರಾಕ್ಟರ್ ಸಾಲ ಮಾಡಿ ತಂದ ತಮಗೆ ಟ್ರೈಲರ್ನ ಅವಶ್ಯಕತೆ ಇತ್ತು. ಆದರೆ ಮನೆಯಲ್ಲಿದ್ದ ಎತ್ತಿನಗಾಡಿಯನ್ನೇಕೆ ಟ್ರೈಲರ್ ಮಾಡಬಾರದು ಎಂದು ಚಿಂತಿಸಿ ಇತರೆ ಟ್ರಾಕ್ಟರ್ ಟ್ರೈಲರ್ನ ಕಾರ್ಯ ವೈಖರಿ ನೋಡಿ ಹತ್ತು ಸಾವಿರ ವೆಚ್ಚ ಮಾಡಿ ಗುಜರಿಯಿಂದ ಸಾಮಾನು ತಂದು ಗುಜರಿಗೆ ಹಾಕಬೇಕಿದ್ದ ನನ್ನ ಟೈರ್ ಗಾಡಿಯನ್ನೆ ಟ್ರೈಲರ್ ಮಾಡಿ ಕೊಂಡಿದ್ದೇನೆ. ಇದು ನನಗೆ ಬಹಳ ಉಪಯೋಗವಾಗಿದೆ. ರೈತರು ಸ್ವಲ್ಪ ತಲೆ ಉಪಯೋಗಿಸಿದರೆ ಎಂತಹ ಬದಲಾವಣೆ ಬೇಕಾದರೂ ಮಾಡಿ ತೋರಿಸಬಹುದು ಎಂದಿದ್ದಾರೆ.

Get real time updates directly on you device, subscribe now.

Comments are closed.

error: Content is protected !!