ರಾಜ್ಯದ 224 ಕ್ಷೇತ್ರಗಳಲ್ಲಿಯೂ ಬಿಎಸ್ ಪಿ ಸ್ಪರ್ಧೆ

153

Get real time updates directly on you device, subscribe now.


ತುಮಕೂರು: ಕರ್ನಾಟಕದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ಬಿಎಸ್ಪಿ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡಲಿದ್ದು, ಜನ ಸಾಮಾನ್ಯರು ದಿನನಿತ್ಯ ಎದುರಿಸುತಿರುವ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿದ್ದೇವೆ ಎಂದು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಉಸ್ತುವಾರಿ ಅರಕಲವಾಡಿ ನಾಗೇಂದ್ರ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೆಸಿಬಿ ಪಕ್ಷಗಳು ಅಗ್ಗದ ಹೆಸರಿನ ಪ್ರಣಾಳಿಕೆಗಳ ಮೂಲಕ ಜನರನ್ನು ಮೋಸ ಮಾಡಿವೆ. ಬಿಎಸ್ಪಿ ಇದುವರೆಗೂ ಎದುರಿಸಿರುವ ಯಾವ ಚುನಾವಣೆಯಲ್ಲಿಯೂ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಸಂವಿಧಾನದ ಆಶಯಗಳೇ ನಮ್ಮ ಪ್ರಣಾಳಿಕೆಗಳಾಗಿವೆ, ಅವುಗಳನ್ನು ಈಡೇರಿಸುವುದು ನಮ್ಮ ಪಕ್ಷದ ಮುಂದಿರುವ ಗುರಿಯಾಗಿದೆ. ಈ ನಿಟ್ಟಿನಲ್ಲಿ ಬಿಎಸ್ಪಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿಯೂ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು, ಶೀಘ್ರದಲ್ಲಿಯೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ಕರ್ನಾಟಕದಲ್ಲಿ 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಬಿಎಸ್ಪಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದೆ. ಈ ದೇಶವನ್ನು 55 ವರ್ಷಗಳ ಕಾಲ ಕಾಂಗ್ರೆಸ್, 8 ವರ್ಷ ಜನತಾ ಪರಿವಾರ ಹಾಗೂ ಕಳೆದ 9 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೆ ಈ ಮೂರು ಪಕ್ಷಗಳು ಸಂವಿಧಾನವನ್ನು ಸಂಪೂರ್ಣವಾಗಿ ಜಾರಿಗೆ ಮಾಡುವಲ್ಲಿ ವಿಫಲವಾಗಿವೆ. ತಾಯಿ ಮತ್ತು ನವಜಾತ ಶಿಶುವಿನ ಮರಣ ಪ್ರಮಾಣದ ಪ್ರಮಾಣದಲ್ಲಿ ಪ್ರಪಂಚದ 198 ರಾಷ್ಟ್ರಗಳಲ್ಲಿ ಭಾರತ 164ನೇ ಸ್ಥಾನದಲ್ಲಿದೆ. ಈ ಅಂಕಿ ಅಂಶವೇ ಭಾರತದಲ್ಲಿ ಬಡವರು, ನಿರ್ಗತಿಕರು, ಹಿಂದುಳಿದ ವರ್ಗದವರ ಸ್ಥಿತಿಗತಿ ಹೇಗಿದೆ ಎಂಬುದನ್ನು ತಿಳಿಸುತ್ತಿದೆ. ರಾಷ್ಟ್ರದ ಮೂರನೇ ಅತಿ ದೊಡ್ಡ ಪಕ್ಷವಾಗಿರುವ ಬಿಎಸ್ಪಿ ಜೆಸಿಬಿ ಪಕ್ಷಗಳಿಗೆ ಪರ್ಯಾಯವಾಗಿ ಜನರ ಆಶೋತ್ತರ ಪೂರೈಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಅರಕಲವಾಡಿ ನಾಗೇಂದ್ರ ತಿಳಿಸಿದರು.

ತುಮಕೂರು ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ರಾಜಧಾನಿ ಬೆಂಗಳೂರಿಗೆ ಅತಿ ಹತ್ತಿರದಲ್ಲಿ ಇರುವ ತುಮಕೂರು ಜಿಲ್ಲಾ ಕೇಂದ್ರದಲ್ಲಿ ಒಂದು ಸರಕಾರಿ ಮೆಡಿಕಲ್, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳಿಲ್ಲಿ, ಸ್ಮಶಾನಕ್ಕೆ ಜಾಗವಿಲ್ಲ. ಕಳೆದ 40- 50 ವರ್ಷಗಳಿಂದ ಬಗರ್ ಹುಕ್ಕುಂ ಸಾಗುವಳಿ ಮಾಡಿ ಸಕ್ರಮಕ್ಕಾಗಿ ಫಾರಂ ನಂ. 50- 53 ಹಾಗೂ 57 ಅರ್ಜಿ ಸಲ್ಲಿಸಿದ್ದರೂ ಇದುವರೆಗೂ ಅವರಿಗೆ ಸಾಗುವಳಿ ಚೀಟಿ ನೀಡಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಇಲ್ಲ. ಜಿಲ್ಲಾಧಿಕಾರಿಗಳ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕುವೆಂಪು ಅವರ ಪುತ್ಥಳಿ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹಿನ್ನೆಲೆಯನ್ನು ಗಮನಿಸಿ ಟಿಕೆಟ್ ಹಂಚಿಕೆ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೀಸಲು ಕ್ಷೇತ್ರಗಳಲ್ಲದೆ, ಜನರಲ್ ಕ್ಷೇತ್ರಗಳಲ್ಲಿಯೂ ಅರ್ಹ ಎಸ್ಸಿ, ಎಸ್ಟಿ ಅಭ್ಯರ್ಥಿಗಳು ದೊರೆತರೆ ಸ್ಪರ್ಧೆಗೆ ಅವಕಾಶ ಕಲ್ಪಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ತಿಪಟೂರಿನ ನಾರಾಯಣ್ ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಜಿಲ್ಲಾಧ್ಯಕ್ಷ ರಾಜಸಿಂಹ, ರುದ್ರಪ್ಪ, ರಾಜ್ಯ ಕಾರ್ಯದರ್ಶಿ ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ದಿನೇಶ್, ರಂಗಯ್ಯ, ದಯಾನಂದ, ನಾಗರಾಜು, ವೀರಕ್ಯಾತಯ್ಯ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!