ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ರಾಜೀವ್ಗಾಂಧಿ ಅವರ ಸಂಸ್ಮರಣೆ ಅಂಗವಾಗಿ ಹುತಾತ್ಮರ ದಿನವನ್ನು ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಅಹಿಂಸೆಯನ್ನೇ ತನ್ನ ಹೋರಾಟದ ಅಸ್ತ್ರವಾಗಿಸಿಕೊಂಡು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಮಹಾತ್ಮಗಾಂಧಿ, ಬಡವರು, ದೀನ ದಲಿತರು, ಅಲ್ಪಸಂಖ್ಯಾತರು ಹಾಗೂ ಜನ ಸಾಮಾನ್ಯರ ಏಳಿಗೆಗೆ ದುಡಿದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಹಾಗೂ ದೇಶವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ದೇಶ ಅಭಿವೃದ್ಧಿಗೆ ಮುನ್ನುಡಿ ಬರೆದ ರಾಜೀವ್ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ, ತನ್ನ ಜೀವನದುದ್ದಕ್ಕೂ ಅಹಿಂಸೆ ಪ್ರತಿಪಾದಿಸಿ, ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧೀಜಿ ಸಾವನ್ನಪ್ಪಿದ್ದು ಹಿಂಸೆಯಿಂದ, ಇದು ಈ ದೇಶದ ದುರಂತ, ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಬ್ರಿಟಿಷರು ಗಾಂಧೀಜಿಯ ಹೋರಾಟ ಸಹಿಸಿಕೊಂಡರು. ಆದರೆ ಸ್ವಾತಂತ್ರ ಬಂದ ನಂತರ ಒಂದು ವರ್ಷ ಕಾಲ ಅವರನ್ನು ಭಾರತೀಯರು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದು ಗಾಂಧಿ ಸಾವಿಗೆ ಪಿತೂರಿ ಮಾಡಿದ ವೀರ ಸಾರ್ವಕರ್ ಇಂದು ಬಿಜೆಪಿ ಪಕ್ಷದ ಪರಮ ಶ್ರೇಷ್ಠ ನಾಯಕ, ಈ ವಿಚಾರವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅವರ ರೀತಿಯಲ್ಲಿಯೇ ದೇಶದ ಉಳಿವಿಗಾಗಿ ಹೋರಾಟ ನಡೆಸಿದ ಇಂದಿರಾ ಗಾಂಧಿ ಮತ್ತು ರಾಜೀವ್ಗಾಂಧಿ ಅವರು ಸಹ ಗುಂಡಿಗೆ ಬಲಿಯಾದರು. ಅವರ ಸಾವಿನ ಹಿಂದಿನ ತ್ಯಾಗ, ಬಲಿದಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಂಡು, ಅವರ ಸಾವು ವ್ಯರ್ಥವಾಗದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ ಎಂದರು.
ಡಿಸಿಸಿಯ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್ ಮಾತನಾಡಿ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ಸುಮಾರು 4000 ಕಿ.ಮೀ ಹೆಚ್ಚು ಪಾದಯಾತ್ರೆ ನಡೆಸಿ ಶ್ರೀನಗರ ತಲುಪಿ ಲಾಲ್ ಚೌಕದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಲು ಮುಂದಾದಾಗ ಹಲವರು ವಿರೋಧಿಸಿದ್ದರು. ಇದು ಖಂಡನೀಯ, ಈ ದೇಶದಲ್ಲಿ ದ್ವೇಷ ಅಳಿಯಬೇಕು. ಪ್ರೀತಿ ಉದಯಿಸಲಿ ಎಂಬ ಮಹತ್ವದ ಉದ್ದೇಶ ಇಟ್ಟುಕೊಂಡು ಅವರು ನಡೆಸಿರುವ ಈ ಹೋರಾಟಕ್ಕಾಗಿ ಅವರಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ಗೌಡ ಮಾತನಾಡಿ, ಕಾಂಗ್ರೆಸ್ ನಾಯಕರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ನೀಡಿದ್ದಾರೆ. ಅವರ ಸಾವು ವ್ಯರ್ಥವಾಗಬಾರದೆಂಬ ಆಶಯ ಕಾಂಗ್ರೆಸ್ ಕಾರ್ಯಕರ್ತರಲ್ಲಿದ್ದರೆ ಮೊದಲು ಗೊಂದಲಗಳ ಸೃಷ್ಟಿ ಕೈಬಿಡಬೇಕು. ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ ವ್ಯಕ್ತಿಗಳು ನಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅವರಿಗೆ ಕೆಲ ಕಾಂಗ್ರೆಸ್ ಮುಖಂಡರು ಕೈಜೋಡಿಸಿರುವುದು ವಿಷಾದದ ಸಂಗತಿ ಎಂದರು.
ಈ ದೇಶಕ್ಕೆ ಸ್ವಾತಂತ್ರ ತಂದು ಕೊಡಬೇಕೆಂದು ಹೋರಾಟ ನಡೆಸಿದ ಮಹಾತ್ಮ ಗಾಂಧಿ ಗುಂಡಿಗೆ ಬಲಿಯಾದರೆ, ಪಂಜಾಬ್ನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಉಗ್ರರ ಆಸೆಗೆ ತಣ್ಣೀರೆರಚಿ ಒಕ್ಕೂಟ ವ್ಯವಸ್ಥೆ ರಕ್ಷಿಸಿದ ಇಂದಿರಾಗಾಂಧಿ ಹಾಗೂ ಶ್ರೀಲಂಕಾ ಮತ್ತು ತಮಿಳಿರ ನಡುವಿನ ಯುದ್ಧ ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ ಕಳುಹಿಸಿ, ಪ್ರಪಂಚದಲ್ಲಿ ಶಾಂತಿ ನೆಲೆಸುವಂತೆ ಮಾಡಿದವರು ರಾಜೀವ್ಗಾಂಧಿ ಸಹ ಹುತಾತ್ಮರಾದರು. ಇಂತಹ ಮಹನೀಯರು ನಮ್ಮ ಪಕ್ಷದ ನೇತಾರರು ಎಂಬುದು ನಾವು ಹೆಮ್ಮೆ ಪಡುವ ವಿಚಾರ, ನಾವು ಹೆಚ್ಚು ಸಕ್ರಿಯರಾಗಿ ಕೆಲಸ ಮಾಡಬೇಕೆಂದು ಚಂದ್ರಶೇಖರ್ ಗೌಡ ತಿಳಿಸಿದರು.
ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಮುರುಳೀಧರ್ ಹಾಲಪ್ಪ, ರೇವಣಸಿದ್ದಯ್ಯ, ಶಿವಾಜಿ, ಪ್ರಸನ್ನಕುಮಾರ್, ಮರಿಚನ್ನಮ್ಮ, ಡಾ.ರಾನ್, ಸುಜಾತ ಇನ್ನಿತರರು ಇದ್ದರು.
Comments are closed.