ಲೋಕಜನ ಶಕ್ತಿ ಪಾರ್ಟಿಯಿಂದ 11 ಕ್ಷೇತ್ರದಲ್ಲಿ ಸ್ಪರ್ಧೆ

93

Get real time updates directly on you device, subscribe now.


ತುಮಕೂರು: ಜಾತಿ, ಭೇದವಿಲ್ಲದೆ 10 ಸಹಸ್ರ ಮಕ್ಕಳಿಗೆ ಊಟ, ವಸತಿ, ಜ್ಞಾನ ನೀಡಿದ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರು ಬದುಕಿದ್ದಂತಹ ತುಮಕೂರು ಜಿಲ್ಲೆಯಲ್ಲಿ ಇಂದಿಗೂ ದಲಿತರಿಗೆ ಸಾಮಾಜಿಕ ಬಹಿಷ್ಕಾರ, ದೇವಾಲಯ ಪ್ರವೇಶ ನಿರಾಕರಣೆಯಂತಹ ಅಸ್ಪಷ್ಯತೆ ಆಚರಣೆಯಲ್ಲಿರುವುದು ದುರಂತದ ಸಂಗತಿಯಾಗಿದೆ ಎಂದು ದಲಿತ ಸೇನೆ ಹಾಗೂ ಲೋಕಜನ ಶಕ್ತಿ ಪಕ್ಷದ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 5 ಜನ ದಲಿತ ಯುವಕರ ಕೊಲೆಯಾಗಿದೆ. ಪೆದ್ದನಹಳ್ಳಿಯ ಇಬ್ಬರು ಯುವಕರ ಕೊಲೆ. ಗುಬ್ಬಿಯ ಅಭಿಷೇಕ ಮತ್ತು ಕುರಿ ಮೂರ್ತಿ ಸೇರಿದಂತೆ ಹಲವರ ಕೊಲೆಯಾಗಿದೆ. ಇದುವರೆಗೂ ಆ ಕುಟುಂಬಗಳಿಗೆ ನ್ಯಾಯ ದೊರೆಕಿಲ್ಲ. ಗುಬ್ಬಿ ತಾಲೂಕು ಅರಿಯೂರು ಶ್ರೀವೈದ್ಯನಾಥೇಶ್ವರ ದೇವಾಲಯದ ಉತ್ಸವ ಮೂರ್ತಿಯನ್ನು ದಲಿತರ ಕೇರಿಗೆ ಮೆರವಣಿಗೆ ತರುವ ವಿಚಾರದಲ್ಲಿ ಗಲಾಟೆ ನಡೆದಿದೆ. ಜಿಲ್ಲೆಯಲ್ಲಿ ಅಸ್ಪೃಶ್ಯತೆ ಚಾಲ್ತಿಯಲ್ಲಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಮತ್ತೊಂದು ಬೇಕೆ ಎಂದು ಪ್ರಶ್ನಿಸಿದರು.


ದಿವಂಗತ ರಾಮ ವಿಲಾಸ್ ಪಾಸ್ವಾನ್ ಅವರ ದಲಿತ ಸೇನೆ ಮತ್ತು ಲೋಕಜನ ಶಕ್ತಿ ಪಾರ್ಟಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದು, ಈ ಬಾರಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದೆ. ಈಗಾಗಲೇ ಪಕ್ಷದ ಟಿಕೆಟ್ ಬಯಸಿ ಹಲವಾರು ಜನರು ಅರ್ಜಿ ಸಲ್ಲಿಸುತ್ತಿದ್ದು, ಫೆಬ್ರವರಿಯಲ್ಲಿ ಬೆಂಗಳೂರಿಗೆ ಚಿರಾಗ್ ಪಾಸ್ವಾನ್ ಅವರು ಭೇಟಿ ನೀಡುತಿದ್ದು, ಈ ವೇಳೆ ಪಕ್ಷ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿ, ಅಂತಿಮ ಪಟ್ಟಿ ಸಿದ್ಧಪಡಿಸಲಾಗುವುದು. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರಕಾರ ಸವಲತ್ತು ದೊರೆಯಬೇಕು ಎಂಬ ನಿಲುವು ಲೋಕ ಜನಶಕ್ತಿ ಪಕ್ಷದ್ದಾಗಿದೆ. ದೇಶದ ಎಲ್ಲಾ ವರ್ಗದ ಬಡವರಿಗೆ ಆರ್ಥಿಕ ಸವಲತ್ತು ದೊರೆತು, ಅವರು ಆರ್ಥಿಕವಾಗಿ ಬೆಳೆಯಬೇಕೆಂಬ ಒಳ್ಳೆಯ ಉದ್ದೇಶವನ್ನು ಪಕ್ಷ ಹೊಂದಿದೆ. ಇದನ್ನೇ ಮುಂದಿಟ್ಟುಕೊಂಡು 2023ರ ಚುನಾವಣೆ ಎದುರಿಸಲಿದ್ದೇವೆ ಎಂದು ಎಂ.ಎಸ್.ಜಗನ್ನಾಥ್ ತಿಳಿಸಿದರು.

ಸರಕಾರಗಳು ಬಡಜನರ ಅಭಿವೃದ್ಧಿಗೆ ನೀಡುತ್ತಿರುವ ಅನುದಾನ ಶಾಸಕರು ಮತ್ತು ಅವರ ಹಿಂಬಾಲಕರ ಕೈ ಸೇರಿ, ಬಡವ-ಶ್ರೀಮಂತರ ನಡುವಿನ ಕಂದಕ ಮತ್ತಷ್ಟು ಹೆಚ್ಚಾಗಿದೆ. ಇದನ್ನು ಆದಷ್ಟು ಕಡಿಮೆ ಮಾಡುವ ಉದ್ದೇಶವನ್ನು ಲೋಕಜನ ಶಕ್ತಿ ಪಾರ್ಟಿ ಹೊಂದಿದೆ. ಈ ಹಿಂದಿನ ರೀತಿ ಇದುವರೆಗೂ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. 2023ರ ಚುನಾವಣೆಯಲ್ಲಿ ಪ್ರಭಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸೇನೆ ಹಾಗೂ ಲೋಕಜನಶಕ್ತಿ ಪಕ್ಷದ ರಾಜ್ಯ ಉಪಾಧ್ಯಕ್ಷ ವೆಂಕಟೇಶ್, ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಚನ್ನಮ್ಮ, ಜಿಲ್ಲಾಧ್ಯಕ್ಷ ಗೂಳೂರು ಸಿದ್ದರಾಜು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ, ಮುಖಂಡರಾದ ಮನು, ಶಾಂತ, ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!