ಪೊಲೀಸರು ಜನ ಸ್ನೇಹಿಯಾಗಿ ಕೆಲಸ ಮಾಡಲಿ

ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ಮುಖ್ಯ: ಐಜಿಪಿ

124

Get real time updates directly on you device, subscribe now.


ತುಮಕೂರು: ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತ ಇಲಾಖೆ, ಇಂತಹ ಪಾವಿತ್ರ್ಯತೆಯುಳ್ಳ ಇಲಾಖೆಯಲ್ಲಿ ಸದಾ ಕಾಲ ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವಾಗ ಯಾವುದೇ ಟೀಕೆಗಳು ಬಂದರೂ ಅದನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ಪರಿಗಣಿಸಬೇಕು. ಬಡ, ಮಧ್ಯಮ ವರ್ಗದಿಂದ ಬಂದು ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾವು ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಬಂದಾಗ ಸೌಜನ್ಯದಿಂದ ಜನಸ್ನೇಹಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ನಾಗರೀಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳ 12ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿ, ಪೊಲೀಸ್ ಠಾಣೆಗಳಿಗೆ ದೂರು ಹೊತ್ತು ಬಡವರು, ದೀನ ದಲಿತರು ಬಂದಾಗ ಅವರ ಕಷ್ಟ ನಿವಾರಿಸುವ ಗಂಭೀರ ಪ್ರಯತ್ನ ಮಾಡಬೇಕು ಎಂದರು.

ಮಹಿಳಾ ಸಬಲೀಕರಣ ಮಾಡಬೇಕಾದರೆ ನಮ್ಮನ್ನು ನಾವು ಸಶಕ್ತಗೊಳಿಸಬೇಕು. ವೃತ್ತಿ ಪರತೆಯಿಂದಲೇ ಮೆಚ್ಚುಗೆ ಗಳಿಸಬೇಕು. ಹಿರಿಯ ಅಧಿಕಾರಿಗಳು ಹಾಗೂ ಸಹದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಭಾರತದ ಸಂವಿಧಾನದ ಶ್ರೇಷ್ಠವಾಗಿದ್ದು, ಸಮಾನತೆ, ಭ್ರಾತೃತ್ವ, ಜಾತ್ಯಾತೀತ ತತ್ವವನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪೊಲೀಸ್ ತರಬೇತಿ ಶಾಲೆಗೆ ಹೆಸರು ತರುವಂತೆ ಕಾರ್ಯ ನಿರ್ವಹಿಸುವ ಮುಖೇನ ನಿಮಗೆ ನೀವೇ ಗೌರವ ಸೃಷ್ಠಿಸಿಕೊಳ್ಳುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.

ಪ್ರಶಿಕ್ಷಾರ್ಥಿಗಳಿಗೆ ಈಜು, ಮಾರ್ಷಲ್ ಆರ್ಟ್ಸ್ ತರಬೇತಿ ನೀಡಲಾಗಿದೆ. ಈ ಮೂಲಕ ತನಿಖಾಧಿಕಾರಿ, ಸಹಾಯಕಾಧಿಕಾರಿ ಕೆಲಸ ಮಾಡುವಷ್ಟು ಪ್ರಶಿಕ್ಷಣಾರ್ಥಿಗಳು ತಯಾರಾಗಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್ ಮಾತನಾಡಿ, ಪ್ರಶಿಕ್ಷಣಾರ್ಥಿಗಳಲ್ಲಿ ಇಂಜಿನಿಯರಿಂಗ್ ಪದವಿ, ಸ್ನಾತಕೋತ್ತರ, ಸ್ನಾತಕ ಪದವೀಧರರು ಹೆಚ್ಚಿದ್ದು, ವಿದ್ಯಾವಂತ ಸಮೂಹ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಲು ಮುಂದಾಗಿರುವುದರಿಂದ ಇಲಾಖೆಯ ಕಾರ್ಯ ಕ್ಷಮತೆ ಹೆಚ್ಚಲು ಸಹಾಯವಾಗಿದೆ ಎಂದರು.

ಎಲ್ಲಾ ಇಲಾಖೆಗಳಲ್ಲಿಯೂ ಮಹಿಳಾ ಪ್ರಾತಿನಿಧ್ಯ ದೊರೆಯುತ್ತಿದ್ದು, ಮಹಿಳಾ ಪ್ರಾತಿನಿಧ್ಯಕ್ಕೆ ನ್ಯಾಯ ದೊರಕಬೇಕಾದರೆ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಎಲ್ಲಾ ವರ್ಗದ ಸಮಸ್ಯೆ ಬಗೆಹರಿಸಲು ಅವಕಾಶ ಇರುವುದು ಪೊಲೀಸ್ ಇಲಾಖೆಗೆ ಮಾತ್ರ. ಇಂತಹ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗುವುದೇ ಅದೃಷ್ಟ ಎಂದರು.

ಗಡಿ ಕಾಯುತ್ತಿರುವ ಸೈನಿಕರಂತೆ ಪೊಲೀಸ್ ಸಿಬ್ಬಂದಿಗೂ ಪ್ರಾಮುಖ್ಯತೆ ಇದೆ. ಠಾಣೆ ದೇವಾಲಯ, ಚರ್ಚ್, ಮಸೀದಿಯಂತೆ ಪವಿತ್ರವಾದ ಜಾಗ, ಅಂತಹ ಜಾಗದಲ್ಲಿ ಪರಿಹಾರ ಅರಸಿ ಬರುವ ನಾಗರಿಕರು ಪೊಲೀಸರ ಮೇಲಿಟ್ಟಿರುವ ನಿರೀಕ್ಷೆಯನ್ನು ಹುಸಿಯಾಗದಂತೆ ನೋಡಿಕೊಳ್ಳಬೇಕು. ಜನರ ವಿಶ್ವಾಸ, ಗೌರವಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಸ್ವಾಮಿ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. 12ನೇ ತಂಡದ ಸರ್ವೋತ್ತಮ ಪ್ರಶಸ್ತಿಯನ್ನು ಪ್ರಶಿಕ್ಷಣಾರ್ಥಿ ಅಶ್ವಿನಿ ಪವಾರ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತರಬೇತಿ ಅವಧಿಯಲ್ಲಿ ಹೊರಾಂಗಣ, ಒಳಾಂಗಣ ಹಾಗೂ ಫೈರಿಂಗ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಿದ್ಧಾರ್ಥ ಗೋಯೆಲ್, ಡಿವೈಎಸ್ಪಿಗಳಾದ ಶ್ರೀನಿವಾಸ್, ಪರಮೇಶ್, ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!