ತುಮಕೂರು: ಸಣ್ಣ ಸಣ್ಣ ಸಮಾಜಗಳು ಒಗ್ಗಟ್ಟು ಪ್ರದರ್ಶಿಸದಿದ್ದರೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದು ಕಷ್ಟ ಸಾಧ್ಯ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾ ನಗರ ಪಾಲಿಕೆ, ಕಸಾಪ, ತುಮಕೂರು ಜಿಲ್ಲಾ ಮಡಿವಾಳ ಸಂಘದ ವತಿಯಿಂದ ಆಯೋಜಿಸಿದ್ದ ಶ್ರೀಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರಕಾರದ ಸವಲತ್ತು ಪಡೆಯಬೇಕೆಂದರೆ ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಶೋಷಿತ ಸಮುದಾಯಗಳು ಒಗ್ಗಡದಿದ್ದರೆ ಮುಂದಿನ ಭವಿಷ್ಯ ಕುಂಠಿತವಾಗಲಿದೆ ಎಂದು ಎಚ್ಚರಿಸಿದರು.
ನನಗೆ ತಿಳಿದಿರುವಂತೆ ತುಮಕೂರು ಗ್ರಾಮಾಂತರದಲ್ಲಿ ಎಲ್ಲಿಯೂ ಮಡಿವಾಳ ಮಾಚಿ ದೇವರ ಸಮುದಾಯ ಭವನಗಳಿಲ್ಲ. ಹಾಗಾಗಿ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮಾಚಿದೇವ ಸಮುದಾಯ ಭವನವನ್ನು 2 ಕೋಟಿ ರೂ. ಗಳಲ್ಲಿ ನಿರ್ಮಿಸಿ ಕೊಡಲಿದ್ದೇವೆ. ಇಲ್ಲದಿದ್ದ ಪಕ್ಷದಲ್ಲಿ ನನ್ನ ಸ್ವಂತ ಖರ್ಚಿನಲ್ಲಿಯೇ ನಿರ್ಮಿಸಿಕೊಡಲು ಸಿದ್ಧರಿರುವುದಾಗಿ ಭರವಸೆ ನೀಡಿದರಲ್ಲದೆ ಕಾರ್ಯಕ್ರಮದ ಖರ್ಚಿಗಾಗಿ 50 ಸಾವಿರ ರೂ. ದೇಣಿಗೆ ನೀಡಿದರು.
ಗ್ರಾಮೀಣ ಭಾಗದಲ್ಲಿ ಸಮುದಾಯ ಭವನ ನಿರ್ಮಿಸುವುದರಿಂದ ಕ್ಷೇತ್ರದ ನೂರಾರು ಜನರಿಗೆ ಅನುಕೂಲವಾಗಲಿದೆ. ಸರಕಾರ ಈ ನಿಟ್ಟಿನಲ್ಲಿ ಸರಕಾರದ ಸವಲತ್ತು ನೀಡುವಾಗ ತಳ ಸಮುದಾಯಗಳಿಗೆ ಮೊದಲ ಅದ್ಯತೆ ನೀಡಬೇಕು. ನಾನು ನಿಮ್ಮ ಸುಃಖದಲ್ಲಿ ಭಾಗಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಕಷ್ಟದಲ್ಲಿ ಖಂಡಿತ ನಿಮ್ಮ ಜೊತೆಗೆ ಇರುತ್ತೇನೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ಉಪ ವಿಭಾಗಾಧಿಕಾರಿ ನಟರಾಜ್, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಲಕ್ಷ್ಮಣ್, ತಾಲೂಕು ಅಧ್ಯಕ್ಷ ಬಿ.ಕೆಂಪನರಸಯ್ಯ, ಹೆಚ್.ದೇವೇಂದ್ರಪ್ಪ, ಚಿ.ನಿ.ಪುರುಷೋತ್ತಮ್, ಶಾಂತಕುಮಾರ್, ಹೆಚ್.ಎಂ.ಸೀನಯ್ಯ, ಬಿ.ವೆಂಕಟ ರಾಮಯ್ಯ, ಬಿ.ಚಿಕ್ಕಣ್ಣ, ಆರ್.ಕೃಷ್ಣಮೂರ್ತಿ, ಕೆ.ಎ.ಗೋವಿಂದರಾಜು, ಆರ್.ಕೆಂಪರಾಮಯ್ಯ, ಜಿ.ಆರ್.ಚನ್ನಬಸವಣ್ಣ, ಟಿ.ಎಸ್.ಲೋಕೇಶ್, ಎಂ.ಎಲ್.ಆನಂದಮೂರ್ತಿ, ಎಸ್.ಕಾರಿಯಪ್ಪ, ಯದುಕುಮಾರ್ ಮತ್ತಿತರರು ಇದ್ದರು.
Comments are closed.