ತುಮಕೂರು: ಜಿಲ್ಲೆಯ ಎಲ್ಲಾ ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಹಬ್ಬ ಹಾಗೂ ಜಯಂತಿಗಳಲ್ಲಿ ವೈಯಕ್ತಿಕ ವಿವಾಹ ಹಾಗೂ ಸಾಮೂಹಿಕ ವಿವಾಹ ನಡೆಯುವ ಸಂದರ್ಭಗಳಲ್ಲಿ ಯಾವುದೇ ಬಾಲ್ಯ ವಿವಾಹ ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಐಸಿಡಿಎಸ್, ಪೋಷಣ್ ಅಭಿಯಾನ 2.0 ಕುರಿತ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕುರಿತು ಜಿಲ್ಲಾ ಮಟ್ಟದ ಯುವ ಮೇಳ ಮತ್ತು ಚಿ.ನಾ.ಹಳ್ಳಿ, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಯುವ ಮೇಳ ಹಮ್ಮಿಕೊಳ್ಳುವಂತೆ ಸೂಚಿಸಿದರು.
ಅತ್ಯಾಚಾರ, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಸಮಾಲೋಚನೆ, ವೈದ್ಯಕೀಯ, ಕಾನೂನು ಸಲಹೆ, ಪೊಲೀಸ್ ನೆರವನ್ನು ಸಖಿ ಒನ್ ಸ್ಟಾಫ್ ಘಟಕದಲ್ಲಿ ಸಕಾಲದಲ್ಲಿ ಒದಗಿಸಬೇಕು. ಸಖಿ ಕೇಂದ್ರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ಸಖಿ ಕೇಂದ್ರದ ಸಿಬ್ಬಂದಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರಗಳಲ್ಲಿನ ಮಕ್ಕಳಿಗೆ ಸ್ವಚ್ಛತೆಯ ಶಿಕ್ಷಣ ನೀಡಬೇಕು ಮೊಬೈಲ್ ಸೇರಿದಂತೆ ಇತರೆ ಗ್ಯಾಜೆಟ್ಗಳು ಅವರಿಗೆ ಕೈಗೆಟಕದಂತೆ ನೋಡಿಕೊಳ್ಳಬೇಕು. ಮಕ್ಕಳ ರಕ್ಷಣಾಧಿಕಾರಿಗಳು ನಿಯಮಿತವಾಗಿ ಬಾಲ ಮಂದಿರಗಳಿಗೆ ಭೇಟಿ ನೀಡಿ ಕಾಲ ಕಾಲಕ್ಕೆ ಸೂಕ್ತ ಸಲಹೆ, ಸೂಚನೆ ನೀಡಬೇಕು ಎಂದು ತಿಳಿಸಿದರು.
ಅಂತೆಯೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಹ ತಮ್ಮ ವ್ಯಾಪ್ತಿಯ ಎಲ್ಲಾ ಅಂಗನವಾಡಿಗಳಿಗೆ ಭೇಟಿ ನೀಡಿ ಸ್ವಚ್ಛತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಪರಿಶೀಲಿಸುವಂತೆ ಸೂಚಿಸಿದರು.
ಪೋಷಣ್ ಅಭಿಯಾನವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಪೌಷ್ಟಿಕತೆಯ ಯೋಜನೆ ಒಗ್ಗೂಡಿಸುವ ಕಾರ್ಯಕ್ರಮವಾಗಿದ್ದು, 0-6 ವರ್ಷದ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿ ಸುಧಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಪೋಷಣ್ ಅಭಿಯಾನ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Comments are closed.