ಕುಣಿಗಲ್: ತಾಲೂಕಿನ ಯಡಿಯೂರು ಹೋಬಳಿಯ ವಿವಿಧ ಗ್ರಾಮಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಬುಧವಾರ ರೈತರು ಬೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಕಚೇರಿ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್, ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ರೈತರು ಬೆಸ್ಕಾಂ ಧೋರಣೆ ಖಂಡಿಸಿ ಘೋಷಣೆ ಕೂಗಿದರು. ಬೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ಅನಿಲ್ಕುಮಾರ್ ಮಾತನಾಡಿ, ಯಡಿಯೂರು ಹೋಬಳಿಯ ಹಂಪಾಪುರ, ರಾಗಿಹಳ್ಳಿ, ಹೊಸೂರು, ಕಿತ್ತಾಘಟ್ಟ, ಕುರುಬಶೆಟ್ಟಿಹಳ್ಳಿ ಇತರೆ ಗ್ರಾಮಗಳಿಗೆ ಕಳೆದ ಕೆಲ ತಿಂಗಳ ಹಿಂದೆ ಅಕಾಲಿಕ ಮಳೆಯಾದ ಪರಿಣಾಮ ಕಂಬಗಳು ಮಾರ್ಕೋನ ಹಳ್ಳಿ ಜಲಾಶಯದಲ್ಲಿದ್ದು ಬಿದ್ದು ಹೋದ ಕಾರಣ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನಿಲ್ಲಿಸಲಾಗಿತ್ತು. 2022ರ ಜುಲೈ ಮಾಹೆಯಲ್ಲಿ ರೈತ ಸಂಘ ಪ್ರತಿಭಟನೆ ನಡೆಸಿದ ಮೇರೆಗೆ ಚೆಸ್ಕಾಂನಿಂದ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಆ ಭಾಗದಿಂದ ವಿದ್ಯುತ್ ಪೂರೈಕೆಯಾಗುತ್ತಿಲ್ಲ, ಗ್ರಾಮಗಳಲ್ಲಿ ನೀರಿದ್ದರೂ ಕೃಷಿ ಮಾಡಲಾಗುತ್ತಿಲ್ಲ. ಕುಡಿಯುವ ನೀರಿಗೂ ಸಮಸ್ಯೆ ಇದೆ. ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಮನವಿ ನೀಡಿದರೂ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದರು.
ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಈಗಲೆ ಹೆಚ್ಚಿದೆ. ರಾತ್ರಿ ಒಂದು ಗಂಟೆ ಎರಡು ಗಂಟೆಗೆ ಮನ ಬಂದಂತೆ ವಿದ್ಯುತ್ ನೀಡುತ್ತಾರೆ. ಗ್ರಾಮಾಂತರ ಪ್ರದೇಶದಲ್ಲಿ ಚಿರತೆ ಹಾವಳಿ, ಅಧಿಕಾರಿಗಳಿಗೆ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಬೆಸ್ಕಾಂ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. 7 ತಿಂಗಳ ಹಿಂದೆ ಮನವಿ ನೀಡಿದ್ದರೂ ವಿದ್ಯುತ್ ವ್ಯವಸ್ಥೆ ಸರಿ ಮಾಡಿಲ್ಲ. ಬೆಸ್ಕಾಂ ಅಧಿಕಾರಿಗಳು ರೈತರ ಬಗ್ಗೆ ಇದೆ ಧೋರಣೆ ನಡೆಸಿದಲ್ಲಿ ಅಧಿಕಾರಿಗಳ ಮನೆಯ ಸಂಪರ್ಕ ಕಟ್ ಮಾಡಿ ಕತ್ತಲಲ್ಲಿ ಹೇಗೆ ಕಾಲ ಕಳೆಯಬೇಕೆಂಬ ಪಾಠ ಕಲಿಸಬೇಕಾಗುತ್ತದೆ ಎಂದರಲ್ಲದೆ ಕೂಡಲೆ ವ್ಯವಸ್ಥೆ ಮಾಡದಿದ್ದಲ್ಲಿ ದನ, ಕರುಗಳ ಸಮೇತ ಬೆಸ್ಕಾಂ ಕಚೇರಿ ಮುಂದೆ ಕೊನೆ ವಾರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು.
ರೈತರು ಪ್ರತಿಭಟನೆ ನಡೆಸಿದ್ದರೂ ಯಾವುದೇ ಅಧಿಕಾರಿಗಳು ಆಗಮಿಸದ ಕಾರಣ ಬೇಸತ್ತ ಪ್ರತಿಭಟನಾಕಾರರು ಮುಖ್ಯ ಬಾಗಿಲು ಮುಚ್ಚಿ ಅಧಿಕಾರಿಗಳನ್ನು ಕೂಡಿ ಹಾಕಿ ಧಿಕ್ಕಾರ ಕೂಗಿದರು. ನಂತರ ಸ್ಥಳಕ್ಕೆ ಆಗಮಿಸಿದ ಯಡಿಯೂರು ಎಇಇ ಸುಹೇಲ್ ಅಹಮದ್, ಕಾಮಗಾರಿಗೆ 37 ಲಕ್ಷ ರೂ. ಗಳಲ್ಲಿ ಅಗತ್ಯ ಪ್ರಕ್ರಿಯೆ ನಡೆಸಲಾಗಿದ್ದು, ಶೀಘ್ರವೆ ಪೂರ್ಣಗೊಳಿಸುವ ಭರವಸೆ ನೀಡಿದರು.
ಇನ್ನೊಂದು ವಾರದಲ್ಲಿ ಸಮಸ್ಯೆ ಬಗೆಹರಿಸದೆ ಇದ್ದಲ್ಲಿ ಬೆಸ್ಕಾಂಗೆ ಮುತ್ತಿಗೆ ಹಾಕಿ ಸಮಸ್ಯೆ ಬಗೆಹರಿಸುವ ವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿ ಧರಣಿ ಹಿಂದಪಡೆದರು. ಪ್ರಮುಖರಾದ ವೆಂಕಟೇಶ್, ಲಕ್ಷ್ಮಣ, ಗೌರೀಶ, ರಂಗಸ್ವಾಮಿ, ಗಂಗಯ್ಯ, ಸಿದ್ದಬೈರಯ್ಯ, ಧನಲಕ್ಷ್ಮೀ, ಜಯಮ್ಮ, ಲೋಕೇಶ, ರಾಜೇಶ, ಚನ್ನೇಗೌಡ, ಶ್ರೀನಿವಾಸ ಇತರರು ಇದ್ದರು.
Comments are closed.