ಆರ್ಥಿಕ ಪ್ರಗತಿ, ಶೈಕ್ಷಣಿಕ ಉನ್ನತಿಗೆ ಶ್ರಮಿಸಿ

ಭಾರತವನ್ನು ವಿಶ್ವ ಗುರುವಾಗಿಸಲು ವಿದ್ಯಾರ್ಥಿಗಳು ಮುಂದಾಗಲಿ

80

Get real time updates directly on you device, subscribe now.


ತುಮಕೂರು: ಭಾರತವು ಇಂದು ವಿಶ್ವದ ಗಮನ ಸೆಳೆಯುತ್ತಿದ್ದು, ವಿಶ್ವ ಗುರುವಾಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಯುವಕರು ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಿಕಟ ಪೂರ್ವ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ್ ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಎಬಿವಿಪಿ ಆಯೋಜಿಸಿದ್ದ ತುಮಕೂರು ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಭಾರತವನ್ನು ಎಲ್ಲಾ ದೇಶಗಳು ಗೌರವದಿಂದ ನೋಡುತ್ತಿವೆ. ಇಲ್ಲಿ ಸಾಮಾಜಿಕ ಸಮಾನತೆ, ಆರ್ಥಿಕ ಪ್ರಗತಿ ಮತ್ತು ಶೈಕ್ಷಣಿಕ ಉನ್ನತಿ ಸಾಧಿಸಲು ಈ ದೇಶದ ಯುವ ಸಮುದಾಯವಾದ ವಿದ್ಯಾರ್ಥಿ ಸಮುದಾಯದ ಕೊಡುಗೆ ಅತ್ಯವಶ್ಯಕ ಎಂದರು.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರೀಯತೆ ಬೆಳೆಸುವ ಎಬಿವಿಪಿಯು ಶೈಕ್ಷಣಿಕ ಕ್ಷೇತ್ರದ ಸುಧಾರಣೆಗೆ ನಿರಂತರ ಹೋರಾಟ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ನಾಯಕತ್ವ ಗುಣ, ಹೋರಾಟದ ಮನೋಭಾವನೆ ಬೆಳೆಸುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಳ್ಳಾವೆಯ ಶ್ರೀಕಾರದೇಶ್ವರ ಮಠದ ಕಾರದ ವೀರಬಸವ ಮಹಾ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಸುಂಸ್ಕೃತರಾಗಿ ತಮ್ಮ ತಂದೆ ತಾಯಿಯರನ್ನು ನೋಡಿ ಕೊಳ್ಳುವಂತಾಗಬೇಕು. ಮೆಕಾಲೆ ಶಿಕ್ಷಣ ಪದ್ಧತಿಯು ಭಾರತೀಯ ಮೌಲ್ಯಗಳನ್ನು ಈಗಾಗಲೇ ನಾಶ ಮಾಡಿದ್ದು ಸಮಾಜ ಸಂವೇದನೆ ಕಳೆದುಕೊಂಡಿದೆ. ಇದನ್ನು ಮರು ಸ್ಥಾಪಿಸುವ ಹೊಣೆ ವಿದ್ಯಾರ್ಥಿಗಳ ಮೇಲಿದೆ ಎಂದರು.

ಮಕ್ಕಳು ದೇವರೆಂದು ಮೂವತ್ತು ವರ್ಷಗಳವರೆಗೆ ಎಲ್ಲವನ್ನು ಕೊಡಿಸಿ ತಂದೆ ತಾಯಿಯರು ನೋಡಿಕೊಳ್ಳುತ್ತಾರೆ. ಆದರೆ ವೃದ್ಧಾಪ್ಯದಲ್ಲಿ ಅವರು ಮಕ್ಕಳಾಗುತ್ತಾರೆ. ಆ ತಂದೆ ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳಲ್ಲಿ ಬೆಳೆಯಬೇಕು. ವೃದ್ಧರಾದ ತಂದೆ ತಾಯಿಯನ್ನು ವೃದ್ಧಾಶ್ರಮಗಳಿಗೆ ದೂಡುವುದು ಮನುಷ್ಯತ್ವವಲ್ಲ. ಎಬಿವಿಪಿಯು ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿ, ಹಿರಿಯರನ್ನು ಗೌರವಿಸುವ ಗುಣ, ಅನ್ಯಾಯ ಪ್ರಶ್ನಿಸುವಂತಹ ಸಾಮಾಜಿಕ ಮೌಲ್ಯ ಮತ್ತು ಸಂಸ್ಕಾ ನೀಡುತ್ತಾ ಬಂದಿದೆ ಎಂದರು.

ಎಬಿವಿಪಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಡಾ.ಎಂ.ವಿ.ಅಜಯ್ ಕುಮಾರ್ ಮಾತನಾಡಿ, ಕೆಲವೇ ಅಧ್ಯಾಪಕರು ಮತ್ತು ವಿದ್ಯಾರ್ಥಿ ಸಮೂಹದಿಂದ ಆರಂಭವಾದ ವಿದ್ಯಾರ್ಥಿ ಪರಿಷತ್ ಇಂದು ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ಪ್ರಪಂಚದ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿದೆ. ವಿದ್ಯಾರ್ಥಿ ಸಮುದಾಯದಲ್ಲಿ ಎದುರಾಗುವ ಸಮಸ್ಯೆ ನಿವಾರಿಸಲು ಹೋರಾಟ ಮತ್ತು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ನಿರ್ಮಾಣ ಮಾಡಲು ರಚನಾತ್ಮಕ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ಪುನರ್ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಅತ್ಯಂತ ಅವಶ್ಯಕವಾಗಿ ಇರಬೇಕಾಗಿರುವ ಗುಣ, ಆದರೆ ಇಂದಿನ ವಿದ್ಯಾರ್ಥಿಗಳಲ್ಲಿ ಅಶಿಸ್ತು ಹೆಚ್ಚಾಗಿದ್ದು ಅದಕ್ಕೆ ಸಾಮಾಜಿಕ ಪರಿಸರವೇ ಕಾರಣ. ಅವರಿಗೆ ಸೂಕ್ತವಾದಂತಹ ಮಾರ್ಗದರ್ಶನ ನೀಡಿದರೆ ಅವರೇ ಈ ದೇಶಕ್ಕೆ ಒಳ್ಳೆಯ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಆ ನಿಟ್ಟಿನಲ್ಲಿ ಎಬಿವಿಪಿ ನಿರಂತರ ಕಾರ್ಯಕ್ರಮಗಳ ಮೂಲಕ ಪ್ರಯತ್ನ ಮಾಡುತ್ತಿದ್ದು, ಈ ಕಾರ್ಯಕ್ಕೆ ಶಿಕ್ಷಣ ಸಂಸ್ಥೆಗಳು ಕೂಡ ಕೈ ಜೋಡಿಸಬೇಕಿದೆ ಎಂದರು.

ತುಮಕೂರು ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಗಳಾದ ತೆಂಗು ಮತ್ತು ಶೇಂಗ ಬೆಳೆಗಳ ಅಭಿವೃದ್ಧಿ ಮತ್ತು ಬಲವರ್ಧನೆಗೆ ಸಂಶೋಧನಾ ಕೇಂದ್ರ ಸರ್ಕಾರ ಸ್ಥಾಪಿಸಬೇಕು ಮತ್ತು ಈ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ಸರ್ಕಾರ ಘೋಷಿಸಬೇಕು ಎಂದು ಈ ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಟೌನ್ಹಾಲ್ ವೃತ್ತದಿಂದ ಎಂಜಿ ರಸ್ತೆ ಮಾರ್ಗವಾಗಿ, ಸ್ವತಂತ್ರ ಚೌಕ ಬಳಸಿಕೊಂಡು ಅಶೋಕ ರಸ್ತೆಯ ಮೂಲಕ ಗುಬ್ಬಿವೀರಣ್ಣ ರಂಗ ಮಂದಿರದ ವರೆಗೂ ಸಾವಿರಾರು ವಿದ್ಯಾರ್ಥಿಗಳು ಶೋಭಾಯಾತ್ರೆಯ ಮೂಲಕ ಘೋಷಣೆ ಕೂಗುತ್ತಾ ತೆರಳಿದರು.

ಜಿಲ್ಲಾ ಪ್ರಮುಖರಾದ ರವೀಂದ್ರ ಮಾತನಾಡಿದರು. ತುಮಕೂರು ಮಹಾನಗರ ಅಧ್ಯಕ್ಷ ಪ್ರೊ.ಶ್ರೀನಿವಾಸ ರಾವ್, ಉಪಾಧ್ಯಕ್ಷ ಡಾ.ಪೃಥ್ವಿರಾಜ, ಜಿಲ್ಲಾ ಸಂಚಾಲಕ ಗಣೇಶ್, ಶ್ರೀನಿವಾಸ, ತುಮಕೂರು ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ್, ಪುನೀತ್, ಮನೋಜ್, ನವ್ಯಶ್ರೀ, ಸ್ಪೂರ್ತಿ, ಗೀತಾ, ಅರ್ಪಿತಾ, ಕಲ್ಯಾಣ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!