ತುಮಕೂರು: ನಗರದ ವಾರ್ಡ್ ನಂ. 28 ಹಾಗೂ 17 ರಲ್ಲಿನ ಸರಸ್ವತಿಪುರಂ ಮತ್ತು ಅಮರಜ್ಯೋತಿ ನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಹಾಗೂ ತುಮಕೂರು ನಗರ ಕ್ಷೇತ್ರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಾರ್ಡ್ ನಂ. 28 ಮತ್ತು 17ರ ಬೂತ್ ನಂ. 182ರ ಪ್ರಮುಖ್ ರಾಮಕೃಷ್ಣಪ್ಪ, 177ರ ಪ್ರಮುಖ್ ದೇವರಾಜು ಮತ್ತು 132ರ ಪ್ರಮುಖ್ ರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡ ಬೂತ್ ವ್ಯಾಪ್ತಿಯ ಪ್ರತಿ ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಯನ್ನು ಜನರಿಗೆ ತಿಳಿಸುವ ಮೂಲಕ ಜನರು ಈ ಬಾರಿಯೂ ಬಿಜೆಪಿ ಪಕ್ಷವನ್ನು ಮತದಾರರು ಆಶೀರ್ವದಿಸುವಂತೆ ಕೋರಿದರು.
ಕೇಂದ್ರ ಸರಕಾರ ದೂರದೃಷ್ಟಿ ಇಟ್ಟುಕೊಂಡು ಈ ಸಾಲಿನ ಬಜೆಟ್ ಮಂಡಿಸಿದೆ. 157 ನರ್ಸಿಂಗ್ ಕಾಲೇಜು, ಭದ್ರಾ ಮೇಲ್ದಂಡೆ ಯೋಜನೆಗೆ ಸುಮಾರು 5300 ಕೋಟಿ ರೂ. ಅನುದಾನ ಸೇರಿದಂತೆ ಹಲವಾರು ಯೋಜನೆಗಳು ಕರ್ನಾಟಕಕ್ಕೆ ಉಪಯುಕ್ತವಾಗಿದ್ದು, ಭವಿಷ್ಯದಲ್ಲಿ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗಲಿದೆ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಅಗ್ಗದ ಯೋಜನೆಗಳಿಗೆ ಮಾರು ಹೋಗದೆ ಶಾಶ್ವತ ಕಾರ್ಯಕ್ರಮಗಳಿಗೆ ಹೆಚ್ಚು ಮನ್ನಣೆ ನೀಡಬೇಕೆಂದು ಮತದಾರರಿಗೆ ಮನವರಿಕೆ ಮಾಡಿಕೊಟ್ಟರು.
ಈ ವೇಳೆ ವಾರ್ಡ್ನ ಸುಮಾರು 100 ಕ್ಕೂ ಮನೆಗಳಿಗೆ ಬಿಜೆಪಿ ಸ್ಟಿಕ್ಕರ್ ಅಂಟಿಸಲಾಯಿತು. ಅಲ್ಲದೆ ಆಸಕ್ತರ ಮೊಬೈಲ್ನಿಂದ ಮಿಸ್ಕಾಲ್ ನೀಡುವ ಮೂಲಕ ಅವರಿಗೆ ಬಿಜೆಪಿ ಪಕ್ಷದ ಸದಸ್ಯತ್ವಕ್ಕೆ ನೋಂದಾಯಿಸಲಾಯಿತು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಹನುಮಂತರಾಜು.ಟಿ.ಹೆಚ್, ಪದಾಧಿಕಾರಿಗಳಾದ ವಿರೂಪಾಕ್ಷಪ್ಪ, ವೇದಮೂರ್ತಿ, ಗಣೇಶ್, ರಾಧಾ ಗಂಗಾಧರ್, ಶಂಕರ್, ರಾಜೀವ್, ಸಂದೀಪಗೌಡ, ಲತಾ ಇತರರು ಇದ್ದರು.
Comments are closed.