ತುಮಕೂರು: ಕೋವಿಡ್ ಸಂದರ್ಭದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ತನುಜಾ ಚಿತ್ರ ಇದೇ ಫೆಬ್ರವರಿ 03ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಜನರು ಚಿತ್ರಮಂದಿರಕ್ಕೆ ಬಂದು ವೀಕ್ಷಿಸುವ ಮೂಲಕ ಸಮಾಜ ಕಳಕಳಿಯ ಚಿತ್ರ ಪ್ರೋತ್ಸಾಹಿಸಬೇಕೆಂದು ತನುಜಾ ಚಿತ್ರದ ನಿರ್ದೇಶಕ ಹರೀಶ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ ಆಗಿದ್ದು, 2020ರ ಅಕ್ಟೋಬರ್ 15 ರಂದು ವಿದ್ಯಾರ್ಥಿನಿಯೊಬ್ಬಳು ಕೋವಿಡ್ನಿಂದ ಪರೀಕ್ಷೆ ಬರೆಯುವ ಅವಕಾಶ ಕೈತಪ್ಪಿ, ನಂತರ ವ್ಯವಸ್ಥೆಯ ಸಹಾಯದಿಂದ ಹೇಗೆ ಪರೀಕ್ಷೆ ಎದುರಿಸಿ, ಗುರಿಯಡೆಗೆ ಮುನ್ನಡೆದಳು ಎಂಬುದನ್ನು ಪ್ರೇಕ್ಷಕರ ಮುಂದಿಡುವ ಪ್ರಯತ್ನವನ್ನು ತನುಜಾ ಸಿನಿಮಾದಲ್ಲಿ ಮಾಡಿದ್ದೇವೆ. ಪತ್ರಿಕೆಯೊಂದರಲ್ಲಿ ಬಂದ ಅಂಕಣವನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ಪ್ರಿಮಿಯರ್ ಷೋ ವೀಕ್ಷಿಸಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಅಲ್ಲದೆ ಅಮೆರಿಕಾ ಮತ್ತು ಜರ್ಮನಿಯಲ್ಲಿಯೂ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಚಾರ ಎಂದರು.
ನಿಜ ಘಟನೆಯನ್ನಾಧರಿಸಿದ ಚಲನಚಿತ್ರವಾದ ಹಿನ್ನೆಲೆಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಿಕ್ಷಣ ಸಚಿವರು ಪಾತ್ರ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ದೊರೆಯದೆ ಪರಿತಪಿಸುತ್ತಿರುವ ಬಾಲಕಿಗೆ ಹೇಗೆ ಶಿಕ್ಷಕರು, ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜನ ಪ್ರತಿನಿಧಿಗಳು ಹೇಗೆ ಬೆಂಬಲವಾಗಿ ನಿಂತು, ಆಕೆ ಪರೀಕ್ಷೆ ಬರೆಯಲು ಸಹಕಾರ ನೀಡಿದವು ಎಂಬ 16 ಗಂಟೆಗಳ ಘಟನೆಯನ್ನು ಎರಡುವರೆ ಗಂಟೆಗೆ ಇಳಿಸಿ, ಸಿನಿಮಾ ಮಾಡಲಾಗಿದೆ. ಯಾವುದೇ ಕಮರ್ಷಿಯಲ್ ಅಂಶಗಳನ್ನು ತುರುಕಿಲ್ಲ. ಯುವ ಜನತೆ, ಅದರಲ್ಲಿಯೂ ವಿದ್ಯಾರ್ಥಿಗಳಿಗೆ ಒಳ್ಳೆಯ ಸಂದೇಶ ನೀಡುವ ಚಿತ್ರ ಇದಾಗಿದ್ದು, ಪರೀಕ್ಷೆಗೆ ಮುನ್ನ ಎಲ್ಲಾ ವಿದ್ಯಾರ್ಥಿಗಳು ಈ ಸಿನಿಮಾ ವೀಕ್ಷಿಸುವಂತೆ ಸರಕಾರ ಮಾಡಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದು ತನುಜಾ ಚಿತ್ರದ ನಿರ್ದೇಶಕ ಹರೀಶ್ ಮನವಿ ಮಾಡಿದರು.
ತನುಜಾ ಚಿತ್ರದ ಮುಖ್ಯ ಪಾತ್ರದಾರಿ ಸಪ್ತಾ ಪಾವೂರ್ ಮಾತನಾಡಿ, ಇದು ನನ್ನ ಏಳನೇ ಸಿನಿಮಾ, ಒಳ್ಳೆಯ ಕಥೆ ಇತ್ತು ಎನ್ನುವ ಕಾರಣಕ್ಕೆ ಸಿನಿಮಾ ಒಪ್ಪಿಕೊಂಡು ಪಾತ್ರ ಮಾಡಿದ್ದೇನೆ. ಒಳ್ಳೆಯ ಪಾತ್ರ ನನ್ನ ವೃತ್ತಿ ಜೀವನಕ್ಕೆ ಬುನಾದಿಯಾಗಲಿದೆ ಎಂಬ ನಂಬಿಕೆ ನನ್ನದು, ಎಲ್ಲರೂ ಬಂದು ಸಿನಿಮಾ ನೋಡಿ ಆಶೀರ್ವದಿಸಬೇಕೆಂದರು.
ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ತನುಜಾ ಕೋವಿಡ್ ಸಂದರ್ಭದ ನೈಜ ಘಟನೆಯನ್ನಾಧರಿಸಿ ಸಿನಿಮಾ ಆಗಿದ್ದು, ವಿದ್ಯಾರ್ಥಿ ಸಮೂಹಕ್ಕೆ ಒಳ್ಳೆಯ ಮೇಸೇಜ್ ಇರುವುದರಿಂದ ಸರಕಾರ ಕೂಡಲೇ ಇದಕ್ಕೆ ಶೇ.100 ತೆರಿಗೆ ರಿಯಾಯಿತಿ ತೋರಿಸಿ, ಎಲ್ಲರೂ ಬಂದು ನೋಡುವಂತೆ ಪ್ರೇರೆಪಿಸಬೇಕು. ಇತ್ತೀಚಿನ ಬಹುತೇಕ ಸಿನಿಮಾಗಳು ಅಹಿಂಸೆಯನ್ನೇ ಪ್ರತಿಪಾದಿ ಸುತ್ತೇವೆ. ಆದರೆ ತನುಜಾ ಚಲನಚಿತ್ರ ಶಿಕ್ಷಣದ ಮಹತ್ವವನ್ನು ತಿಳಿಸುವ ಒಂದು ಒಳ್ಳೆಯ ಮೂವಿ, ಹಾಗಾಗಿ ಎಲ್ಲರೂ ಈ ಸಿನಿಮಾ ನೋಡಿ ಪ್ರೋತ್ಸಾಹಿಸುವಂತಾಗಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಇತರೆ ಕಲಾವಿದರು, ಕನ್ನಡ ಪರ ಸಂಘಟನೆಗಳ ಮುಖಂಡರು ಇದ್ದರು.
Comments are closed.