ಸೂಕ್ತ ಬಸ್ ವ್ಯವಸ್ಥೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

161

Get real time updates directly on you device, subscribe now.


ಕುಣಿಗಲ್: ತಾಲೂಕಿನ ಅಮೃತೂರು ಹೋಬಳಿಯ ಕೀಲಾರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ವಿದ್ಯಾರ್ಥಿಗಳು ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಬರಲು ಸೂಕ್ತ ಬಸ್ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್ ಡಿಪೋದ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ಡಿಪೋ ಮುಂದೆ ಜಮಾವಣೆಗೊಂಡ ಕೀಲಾರ, ಕೀಲಾರ ಕೊಪ್ಪಲು, ಬ್ಯಾಡಗೆರೆ, ಸಣಬಘಟ್ಟ, ರಾಮೇದೇವರ ಪಾಳ್ಯ, ಕುಂಬಾರ ಪಾಳ್ಯ ಸುತ್ತಮುತ್ತಲ ಗ್ರಾಮಗಳ ವಿದ್ಯಾರ್ಥಿಗಳು ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಈ ವೇಳೆ ವಿದ್ಯಾರ್ಥಿ ವರದರಾಜು ಮಾತನಾಡಿ, ಕೀಲಾರ ಸುತ್ತಮುತ್ತಲ ಗ್ರಾಮಗಳು ತಾಲೂಕಿನ ಗಡಿ ಗ್ರಾಮಗಳಾಗಿವೆ. ಕೀಲಾರ ಗ್ರಾಮಕ್ಕೆ ಈ ಹಿಂದೆ ಸಾರಿಗೆ ಸಂಸ್ಥೆ ಬಸ್ ಬರುತ್ತಿತ್ತು. ಕೊವಿಡ್ ಸಮಸ್ಯೆಯಿಂದ ನಿಂತ ಬಸ್ ಬರುತ್ತಿಲ್ಲ. ಖಾಸಗಿ ಬಸ್ಗಳು ಇಲ್ಲ. ಕೀಲಾರ ಸುತ್ತಮುತ್ತಲ ಸುಮಾರು ಹನ್ನೆರಡಕ್ಕೂ ಹೆಚ್ಚು ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಕುಣಿಗಲ್ ಪಟ್ಟಣ ಸೇರಿದಂತೆ ಇತರೆಡೆಗೆ ಬರಬೀಕಿದೆ. ಯಾವುದೇ ಬಸ್ಗಳು ಬಾರದ ಕಾರಣ ಪರದಾಡುವಂತಾಗಿದೆ ಎಂದರು.

ಗ್ರಾಮ ಪಂಚಾಯಿತಿ, ಶಾಸಕರಿಗೆ ಮನವಿ ನೀಡಿದರೂ ಕ್ರಮವಾಗಿಲ್ಲ. ಸರ್ಕಾರ ನೋಡಿದರೆ ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುತ್ತದೆ. ಆದರೆ ಗ್ರಾಮದಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಹೆಣ್ಣು ಮಕ್ಕಳಿಗೆ ಓದುವ ಛಲ ಇದ್ದರೂ ಓದಲಾಗದೆ ಮನೆಯಲ್ಲೆ ಉಳಿಯುವಂತಾಗಿ ಮನೆಯವರು ಮದುವೆ ಮಾಡುವಂತಾಗಿದೆ. ಸಾರಿಗೆ ಇಲಾಖೆಗೆ ಮನವಿ ನೀಡಿ ತಿಂಗಳಾದರೂ ಕ್ರಮವಿಲ್ಲ. ದಿನಾಲೂ ನೂರಾರು ರೂ. ಬಸ್ ಚಾರ್ಜ್ಗೆ ಖರ್ಚು ಮಾಡಿ ಓದಲು ಎಲ್ಲರೂ ಬಡ ರೈತರ ಮಕ್ಕಳೆ, ಸಾರಿಗೆ ಇಲಾಖೆ ಬಸ್ಪಾಸ್ ನೀಡಿದೆ, ಬಸ್ ಇಲ್ಲ. ಕೇಳಿದರೆ ಉತ್ತರಿಸುತ್ತಿಲ್ಲ. ಶಾಸಕರಿಗೂ ಹೇಳಿ ಹೇಳಿ ಸಾಕಾಗಿದೆ. ಗ್ರಾಮ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲ. ಸುಮಾರು ಎಪ್ಪತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಬಸ್ ಇಲ್ಲದ ಕಾರಣ ವಿದ್ಯೆಯಿಂದ ವಂಚಿತವಾಗುವಂತಾಗಿದೆ ಎಂದರು.

ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಘಟಕ ವ್ಯವಸ್ಥಾಪಕ ಶ್ರೀನಿವಾಸ್, ಈಗಾಗಲೆ ಈ ಮಾರ್ಗದಲ್ಲಿ ಬಸ್ ಓಡಿಸಲು ಸರ್ವೆ ನಡೆಸಿ ಅನುಮತಿಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ಬಂದ ನಂತರ ಮುಂದಿನ ಹತ್ತು ದಿನದೊಳಗೆ ಸಂಚಾರ ಆರಂಭಿಸಲಾಗುವುದು ಎಂದರು.

ಇದಕ್ಕೆ ಆಕ್ಷೇಪಿಸಿದ ವಿದ್ಯಾರ್ಥಿಗಳು ಘಟಕ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿದರು. ವಿದ್ಯಾರ್ಥಿಗಳಾದ ದರ್ಶನ, ಪುನೀತ್, ಆನಂದ, ಕವಿತಾ, ವಿದ್ಯಾಶ್ರೀ, ಸೌಮ್ಯ, ಚಂದನ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!