ಕುಣಿಗಲ್: ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಮೇಲೆ ವ್ಯಕ್ತಿ ಒಬ್ಬ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಹಲ್ಲೆಗೊಳಗಾದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಹಲ್ಲೆಕೋರನ ಮೇಲೆ ಪ್ರಕರಣ ದಾಖಲಾಗಿದೆ.
ಭಾನುವಾರ ರಾತ್ರಿ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಮುಖ್ಯ ಪೇದೆ ಬೊಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾಗ, ವ್ಯಕ್ತಿಯೊರ್ವ ಆಗಮಿಸಿ, ತನ್ನ ಬೈಕನ್ನು ಠಾಣ ಮುಖ್ಯದ್ವಾರಕ್ಕೆ ಅಡ್ಡಲಾಗಿ ನಿಲ್ಲಿಸಿ, ತನ್ನ ಮೇಲೆ ಹಲ್ಲೆಯಾಗಿದ್ದು ಪ್ರಕರಣ ದಾಖಲಿಸುವಂತೆ, ಸಿಬ್ಬಂದಿ ಕುಳಿತುಕೊಳ್ಳುವ ಕುರ್ಚಿಯ ಮೇಲೆ ಕುಳಿತು ದೂರು ದಾಖಲಿಸುವಂತೆ ಒತ್ತಾಯಿಸಿದ ಎನ್ನಲಾಗಿದೆ.
ಈ ವೇಳೆ ವಿವರ ನೀಡುವಂತೆ ಸಿಬ್ಬಂದಿ ಕೇಳಿದಾಗ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಮುಂದಾದರು, ಘಟನೆ ವಿಡಿಯೋ ಮಾಡಲು ಮುಂದಾದ ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರು. ಠಾಣೆಯಲ್ಲಿ ನಡೆಯುತ್ತಿದ್ದ ವಾಗ್ವಾದ ಕೇಳಿಸಿಕೊಂಡ ಒಳಗಿದ್ದ ಸಿಬ್ಬಂದಿ ಹೊರಬಂದು ನೋಡಿದಾಗ, ಅವರ ಮೇಲೆಯೂ ವ್ಯಕ್ತಿ ಕೂಗಾಡಿದರು. ಸಿಬ್ಬಂದಿ ತುರ್ತು ರಕ್ಷಕ ವಾಹನಕ್ಕೆ ಕರೆ ಮಾಡಿ, ಇಲಾಖೆಯ ಮೇಲಾಧಿಕಾರಿಗಳಿಗೆ ವ್ಯಕ್ತಿಯ ಅನುಚಿತ ವರ್ತನೆ ಗಮನಕ್ಕೆ ತಂದರು. ಆ ವ್ಯಕ್ತಿಯು ತಾನು ಕಾನೂನು ಬಲ್ಲವನಾಗಿದ್ದು ನಿಮ್ಮ ಮೇಲೆ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿ ಕೂಗಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಮಲ್ಲಘಟ್ಟದ ರಾಕೇಶ್ ಎಂಬುವರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
Comments are closed.