ತುಮಕೂರು: ಗುಬ್ಬಿ ತಾಲ್ಲೂಕಿನ ಬಿದಿರೆಹಳ್ಳಿ ಕಾವಲ್ ಬಳಿ ನಿರ್ಮಾಣ ಮಾಡಲಾಗಿರುವ ಹೆಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆ ಮತ್ತು ಲೈಟ್ ಯಟಿಲಿಟಿ ಹೆಲಿಕಾಪ್ಟರ್ ನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅನಾವರಣ ಗೊಳಿಸಿದರು.
ಇದೇ ವೇಳೆ ಜಲ ಜೀವನ್ ಮಿಷನ್ ಯೋಜನೆ, ಚೆನ್ನೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಡಿಯಲ್ಲಿ ತುಮಕೂರು ಕೈಗಾರಿಕಾ ಟೌನ್ ಶಿಪ್ಗೂ ಪ್ರಧಾನಿ ಮೋದಿ ಚಾಲನೆ ನೀಡಿದರು.
ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ದೇಶದಲ್ಲಿ ತುಮಕೂರಿಗೆ ವಿಶೇಷ ಸ್ಥಾನ ಇದೆ. ಸಿದ್ದಗಂಗಾ ಮಠ ಇರುವುದು ಈ ನಾಡಿನಲ್ಲೆ ಅಕ್ಷರ, ಅನ್ನ ನೀಡಿದ ಯೋಗಿ ಶಿವಕುಮಾರಶ್ರೀ, ಗುಬ್ಬಿಯ ಚಿದಂಬರ ಆಶ್ರಮ, ಚೆನ್ನಬಸವೇಶ್ವರಸ್ವಾಮಿ ನಾಡಲ್ಲಿ ಈಗ ಹೆಲಿಕಾಪ್ಟರ್ ಘಟಕ ಉದ್ಘಾಟಿಸಲು ಹೆಮ್ಮೆಯಾಗುತ್ತದೆ ಎಂದರು.
ಈ ವೇಳೆ ಪ್ರಧಾನಿ ಮೋದಿ ಮಾತನಾಡಿ, ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ ನಿರ್ಮಿಸುವ ಸಂಕಲ್ಪದೊಂದಿಗೆ ಹೆಚ್ಎಎಲ್ ಘಟಕ ಪ್ರಾರಂಭಕ್ಕೆ ಚಾಲನೆ ನೀಡಲಾಗಿದ್ದು, ಇಂದು ಶೇ.60 ಸ್ವದೇಶಿ ನಿರ್ಮಿತ ರಕ್ಷಣಾ ಸಾಮಗ್ರಿಗಳನ್ನು ಸೇನೆ ಬಳಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಕಳೆದ ಎಂಟು ವರ್ಷಗಳಲ್ಲಿ ಸರ್ಕಾರಿ ರಕ್ಷಣಾ ಸಂಸ್ಥೆಗಳ ಗುಣ ಮಟ್ಟ ಸುಧಾರಿಸುವುದರೊಂದಿಗೆ ಖಾಸಗಿ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಿರುವುದು ಆತ್ಮ ನಿರ್ಭರ ಭಾರತಕ್ಕೆ ವೇಗ ನೀಡಿದೆ. ಭಾರತ ಮೊದಲು ಎನ್ನುವ ಭಾವನೆಯಿಂದ ಕೆಲಸ ಮಾಡಿದರೆ ಫಲ ಬೇಗ ಸಿಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಎರಡು ಮೂರು ವರ್ಷಗಳಲ್ಲಿ ಬದಲಾವಣೆ ಆಗಿದೆ. ರಕ್ಷಣಾ ಸಾಮಗ್ರಿ ರಫ್ತು ಹೆಚ್ಚಳವಾಗಿದೆ. ತುಮಕೂರಿನಲ್ಲಿ ಹೆಚ್ಚು ಹೆಲಿಕಾಪ್ಟರ್ ಉತ್ಪಾದನೆಯಾಗಲಿದ್ದು 4 ಲಕ್ಷ ಕೋಟಿ ವಹಿವಾಟು ಆಗಲಿದೆ. ಸಾವಿರಾರು ಉದ್ಯೋಗಿಗಳು, ಸ್ವಯಂ ಉದ್ಯೋಗಿಗಳಿಗೆ ಅವಕಾಶ ದೊರೆಯಲಿದೆ ಎಂದರು.
ಭಾರತದ ಆತ್ಮ ನಿರ್ಭರವನ್ನು ಹೆಚ್ಎಎಲ್ ಮುನ್ನಡೆಸುತ್ತಿದೆ. ಫುಡ್ ಪಾರ್ಕ್, ಹೆಚ್ಎಎಲ್ ನಂತರ ಕೈಗಾರಿಕಾ ಟೌನ್ ಶಿಪ್ ತುಮಕೂರು ಜಿಲ್ಲೆಗೆ ದೊರೆತಿದ್ದು, ಭಾರತದ ಔದ್ಯೋಗಿಕ ನೆಲೆಯಾಗಿ ರೂಪುಗೊಳ್ಳಲಿದೆ ಎಂದರು.
ತುಮಕೂರು ಜಿಲ್ಲೆಗೆ ಕೈಗಾರಿಕಾ ಕಾರಿಡಾರ್, ಜಲಜೀವನ್ ಮಿಷನ್ ಲಭ್ಯವಾಗುತ್ತಿರುವುದು ಸಂತೋಷ ಆಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಯೋಜನೆಗಳೆ ಸಾಕ್ಷಿ. ನಾವು ಸಂಕಲ್ಪ ಮಾಡಿದಂತೆ ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಉಪಕರಣ ತಯಾರು ಮಾಡುತ್ತಿದ್ದೇವೆ. ವಿದೇಶಗಳ ಮೇಲೆ ಅವಲಂಬನೆ ನಿಲ್ಲಿಸುತ್ತಿದ್ದೇವೆ. ಕಾಪ್ಟರ್, ವಿಮಾನ, ಫೈಟರ್ ಜೆಟ್ ನಿರ್ಮಾಣ ಮಾಡುವ ಶಕ್ತಿ ಪಡೆದುಕೊಂಡಿದ್ದೇವೆ ಎಂದರು.
ಹೆಚ್ಎಎಲ್ ಎಲ್ಲಿದೆ ಎಂದು ಆರೋಪ ಮಾಡುತ್ತಿದ್ದರು. ಆರೋಪ ಮಾಡುವವರಿಗೆ ನಾವು ಹೆಚ್ಎಎಲ್ ಉದ್ಘಾಟನೆ ಮಾಡಿ ತೋರಿಸಿದ್ದೇವೆ. ಸುಳ್ಳು ಆರೋಪ ಮಾಡುವ ವಿಪಕ್ಷಗಳಿಗೆ ಹೆಚ್ಎಎಲ್ ಉದ್ಘಾಟನೆ ಮಾಡಿ ಉತ್ತರ ನೀಡಿದ್ದೇವೆ. ಡಿಫೆನ್ಸ್ ಸೆಕ್ಟರ್ ನಲ್ಲಿ ಆತ್ಮ ನಿರ್ಭರ ಯೋಜನೆ ಮೂಲಕ ಯಂತ್ರೋಪಕರಣ ತಯಾರು ಮಾಡಲಾಗುತ್ತಿದೆ ಎಂದು ಹೇಳಿದರು.
ಇನ್ನು ಜಲಜೀವನ್ ಮಿಷನ್ ಯೋಜನೆ ಮೂಲಕ ಪ್ರತಿ ಮನೆಗೆ ನೀರು ಕೊಡುವ ಕೆಲಸ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ದೂರದ ಊರಿಗೆ ಹೋಗಿ ನೀರು ತರುವ ಪರಿಸ್ಥಿತಿ ಇತ್ತು. ನಮ್ಮ ಸರ್ಕಾರ ನೀರಾವರಿ ಯೋಜನೆ ಮೂಲಕ ಪ್ರತಿ ಮನೆಗೆ ಮತ್ತು ರೈತರ ಭೂಮಿಗೆ ನೀರು ನೀಡುವ ಕಾರ್ಯಕ್ಕೆ ಮುಂದಾಗಿದೆ ಎಂದು ತಿಳಿಸಿದರು.
ಬಡವರು, ಮಧ್ಯಮ ವರ್ಗದ ಅಭಿವೃದ್ಧಿ ಗೆ ಕೇಂದ್ರದ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಸಂಪನ್ಮೂಲ, ಶಕ್ತಿಯುತ ಭಾರತ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಸರ್ವ ಪ್ರಿಯ, ಸರ್ವ ಹಿತ ಕಾಯುವ, ಭಾರತದ ನಾರಿ ಶಕ್ತಿ, ರೈತರ ಹಿತ ಕಾಯುವ ಬಜೆಟ್ಅನ್ನು ನಾವು ಈ ಬಾರಿ ನೀಡಿದ್ದೇವೆ. ಕುಂಬಾರ, ಕಮ್ಮಾರಾ, ಚಮ್ಮಾರ, ಅಕ್ಕಸಾಲಿಗ ಸೇರಿದಂತೆ ಇತರ ಜನಾಂಗದವರಿಗೆ ಪಿಎಂ ಕಿಸಾನ್ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ಏಳು ಲಕ್ಷದ ವರೆಗೆ ಯಾವುದೇ ಇನ್ ಕಂ ಟ್ಯಾಕ್ಸ್ ಇಲ್ಲದಂತೆ ಮಾಡಿದ್ದೇವೆ ಎಂದರು.
ಸಿರಿಧಾನ್ಯ ಕರ್ನಾಟಕ ದಲ್ಲಿ ಶ್ರೇಷ್ಠ ಅನ್ನ ಎನಿಸಿಕೊಂಡಿದೆ. ಕರ್ನಾಟಕದ ರಾಗಿ ಮುದ್ದೆ, ರಾಗಿ ರೊಟ್ಟಿ ಶ್ರೇಷ್ಠವಾದುದು, ಸಿರಿಧಾನ್ಯ ಬೆಳೆ ಮೌಲ್ಯವರ್ಧನೆಗೆ ಹಣ ನೀಡಿದ್ದೇವೆ ಎಂದರು.
ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಸುಗಮವಾಗಿ ಸಾಗುತ್ತಿದೆ. ರಕ್ಷಣಾ ಸಾಮಾಗ್ರಿ ನಿರ್ಮಾಣದಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ. ಈಗ ಹೆಚ್ಎಎಲ್ ಉದ್ಘಾಟನೆ ಆಗುತ್ತಿರುವುದು ಸಂತೋಷ ಆಗುತ್ತಿದೆ. ರಾಜ್ಯದಲ್ಲಿ ಹೆಚ್ಎಎಲ್ ಉದ್ಘಾಟನೆ ಆಗುತ್ತಿರುವುದು ಸ್ವಾವಲಂಬನೆಯ ಸಂಕೇತವಾಗಿದೆ. ದೇಶದ ರಕ್ಷಣಾ ಕ್ಷೇತ್ರಕ್ಕೆ ಆತ್ಮ ನಿರ್ಭರ ಮೂಲಕ ಹೆಲಿಕಾಪ್ಟರ್ ನಿರ್ಮಾಣ ಆಗುತ್ತಿರುವುದು ಹೆಮ್ಮೆಯ ವಿಚಾರ. ನಮ್ಮ ಸೇನೆ, ರಕ್ಷಣ ಕ್ಷೇತ್ರ ಬಲಿಷ್ಠಗೊಳ್ಳುತ್ತಿರುವುದು, ಪ್ರಧಾನಿ ಮೋದಿ ಅವರು ನಮಗೆ ಬೆಂಬಲವಾಗಿ ಇದ್ದಾರೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಸಿದ್ದಗಂಗಾ ಶ್ರೀಗಳ ಪುಣ್ಯ ಭೂಮಿಯಲ್ಲಿ ಔದ್ಯೋಗಿಕ ಕ್ರಾಂತಿ ಆಗುತ್ತಿರುವುದು ನಮ್ಮ ಹೆಮ್ಮೆ ಎಂದರು.
ಹೆಚ್ಎಎಲ್ ತಮ್ಮದೇ ಇತಿಹಾಸ ಹೊಂದಿದೆ. ಇದು ಶ್ರೇಷ್ಠ ಘಟಕ, ಈ ಘಟಕ ಸ್ಥಾಪನೆಗೆ ಮೋದಿ ಅಡಿಗಲ್ಲು ಹಾಕಿ ಅವರೇ ಉದ್ಘಾಟನೆ ಮಾಡುತ್ತಿರುವುದು ಅಭೂತ ಪೂರ್ವ ಸಾಧನೆ. ಡಬಲ್ ಇಂಜಿನ್ ಸರ್ಕಾರದ ಇಲ್ಲದಿದ್ದರೆ ಈ ಭಾಗದಲ್ಲಿ ಹೆಲಿಕಾಪ್ಟರ್ ಘಟಕ ಸ್ಥಾಪನೆ ಆಗಿ ಕಾಪ್ಟರ್ ಹಾರುತ್ತಿರಲಿಲ್ಲ ಎಂದರು.
ಜಲ ಜೀವನ್ ಯೋಜನೆ ಮೋದಿಯವರ ಕನಸಿನ ಯೋಜನೆ, ಚಿ.ನಾ.ಹಳ್ಳಿ, ತಿಪಟೂರಿನಲ್ಲಿ ಯೋಜನೆ ಜಾರಿಗೆ ಮೋದಿ ಚಾಲನೆ ನೀಡಿದ್ದಾರೆ ಎಂದರು.
ಕೇಂದ್ರ ಸಚಿವ ನಾರಾಯಣ ಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಮಾಧುಸ್ವಾಮಿ, ನಾಗೇಶ್, ನಿರಾಣಿ, ಸೋಮಣ್ಣ, ಸಂಸದರಾದ ಜಿ.ಎಸ್.ಬಸವರಾಜು, ಜಗ್ಗೇಶ್, ಶಾಸಕರಾದ ಜ್ಯೋತಿಗಣೇಶ್, ಎಂ.ಚಿದಾನಂದ್ ಗೌಡ, ಮಸಾಲೆ ಜಯರಾಮ್, ನಾರಾಯಣಸ್ವಾಮಿ, ಡಾ.ರಾಜೇಶ್ಗೌಡ, ಜಿಲ್ಲಾಧಿಕಾರಿ ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಇತರರು ಇದ್ದರು.
Comments are closed.