ಶಿರಾ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಬಿಜೆಪಿ ಪಕ್ಷದಿಂದ ಟಿಕೆಟ್ ಬಯಸುವ ಪ್ರಬಲ ಆಕಾಂಕ್ಷಿ ಎಂದು ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷ ಬಿ.ಕೆ.ಮಂಜುನಾಥ್ ಘೋಷಿಸಿದರು.
ಜುಂಜರಾಮನಹಳ್ಳಿ ಮಾರ್ಗದ ತಮ್ಮ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಬಿಜೆಪಿ ಬಲಗೊಳಿಸುವ ಜವಾಬ್ದಾರಿ ಹೊತ್ತು ಎಲ್ಲೆಡೆ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಬಂದಿದ್ದು, ಪಕ್ಷ ಬಲ ಗೊಳಿಸುವ ಯತ್ನ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಈ ಹಿಂದೆಯೂ ಪಕ್ಷ ಸಂಘಟಿಸಿದ್ದು, ಎರಡು ಬಾರಿ ಪಕ್ಷದಿಂದ ಟಿಕೆಟ್ ಪಡೆದು ಒಮ್ಮೆ 25 ಸಾವಿರದಷ್ಟು ಮತ, ಮತ್ತೊಮ್ಮೆ ಕೆಜೆಪಿ ಪಕ್ಷ ಹುಟ್ಟಿ ಮತ ವಿಭಜನೆಗೊಂಡಾಗಲೂ 19 ಸಾವಿರ ಮತ ಪಡೆದಿದ್ದೇನೆ ಎಂದರು.
ಪ್ರಸ್ತುತ ಶಿರಾದಲ್ಲಿ ಕಮಲ ಅರಳಿದೆ. ಪಕ್ಷ ಬಲವರ್ದನೆಗೊಂಡಿದ್ದು, ನಾನೂ ಕೂಡಾ ಟಿಕೆಟ್ ಆಕಾಂಕ್ಷಿ ಎಂದು ಪಕ್ಷದ ಹಿರಿಯ ಮುಖಂಡರಿಗೆ, ಪಕ್ಷದ ರಾಜ್ಯಾಧ್ಯಕ್ಷರಿಗೆ ತಿಳಿಸಿದ್ದೇನೆ. ಒಂದು ವೇಳೆ ಪಕ್ಷ ನನಗೆ ಟಿಕೆಟ್ ಕೊಟ್ಟರೆ ಗೆಲುವು ನನ್ನದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ, ಈ ಹಿಂದೆ 2018ರಲ್ಲಿ ಟಿಕೆಟ್ ಹಂಚಿಕೆಯಾಗಿ ಹಿಂಪಡೆದಾಗ ತಟಸ್ಥನಾಗಿದ್ದು ಬಿಟ್ಟರೆ ಪಕ್ಷ ವಿರೋಧಿಯಾಗಿ ಎಂದೂ ವರ್ತಿಸಿಲ್ಲ. ನನಗೆ ವಹಿಸಿಕೊಡುವ ಯಾವುದೇ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬಲ್ಲೆ. ನಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಳ್ಳುವುದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ನನ್ನ ಹಾಗೂ ಹಾಲಿ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮಿಬ್ಬರಿಗೂ ಅಷ್ಟೇ ಅಲ್ಲ ಪಕ್ಷದ ಯಾವುದೇ ಕಾರ್ಯಕರ್ತನಿಗೂ ಟಿಕೆಟ್ ಕೇಳುವ ಹಕ್ಕಿದೆ. ಆದರೆ ಯಾರಿಗೆ ಕೊಡಬೇಕು ಎನ್ನುವುದು ಹೈಕಮಾಂಡ್ ತೀರ್ಮಾನ. ನಾನು ಎಂದಿಗೂ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಪಕ್ಷದ ತಾಲ್ಲೂಕು ಅಧ್ಯಕ್ಷ ರಂಗಸ್ವಾಮಿ, ನಗರಾಧ್ಯಕ್ಷ ವಿಜಯರಾಜ್, ಮಾಲಿ ಸುರೇಶ್, ಮಾಲಿ ಮರಿಯಪ್ಪ, ಬಸವರಾಜು, ಮನೋಹರ ನಾಯಕ, ಷಣ್ಮುಖಪ್ಪ, ಮುದಿಮಡು ಮಂಜುನಾಥ್, ಯಲಿಯೂರು ಮಂಜುನಾಥ್, ಬರಗೂರು ತಿಪ್ಪೇಸ್ವಾಮಿ, ಕೃಷ್ಣಮೂರ್ತಿ, ಸಂತೋಶ್, ಬರಗೂರು ಶಿವಕುಮಾರ್, ಪ್ರಕಾಶ್ ಮುದ್ದುರಾಜ್, ಸಂತೇಪೇಟೆ ನಟರಾಜು, ಮಂಜೇಶ್, ಮದ್ದೇವಳ್ಳಿ ರಾಮಕೃಷ್ಣ, ರಾಘವೇಂದ್ರ, ಕರಿಯಣ್ಣ, ಸಂಪತ್, ಪಡಿ ರಮೇಶ್, ಶಾರದ ಶಿವಕುಮಾರ್, ಮಲ್ಲಯ್ಯ, ಚಿಕ್ಕಣ್ಣ ಮತ್ತಿತರರು ಹಾಜರಿದ್ದರು.
Comments are closed.