ತುಮಕೂರು: ರಾಷ್ಟ್ರೀಯ ಏಕಾತ್ಮತಾ ಯಾತ್ರೆ ಪ್ರವಾಸವಲ್ಲ. ನಮ್ಮ ದೇಶವನ್ನು ಅರಿತುಕೊಳ್ಳುವ ಒಂದು ಮಹತ್ತರ ಯೋಜನೆ, ದೇಶ ಕಟ್ಟುವಂತ ಕೆಲಸ ಮಾಡುತ್ತಿರುವ ಎಬಿವಿಪಿಯ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹೇಳಿದರು.
ತುಮಕೂರು ವಿಶ್ವ ವಿದ್ಯಾಲಯವು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಏಕಾತ್ಮತಾ ಯಾತ್ರೆ-2023ರ ವಿದ್ಯಾರ್ಥಿಗಳ ಅಂತಾರಾಜ್ಯ ಬಾಂಧವ್ಯದ ಅನುಭವ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಭಾರತದ ಈಶಾನ್ಯದ ಏಳು ರಾಜ್ಯಗಳ ವಿದ್ಯಾರ್ಥಿ ಪ್ರತಿನಿಧಿಗಳು ಮತ್ತು ಗಣ್ಯರನ್ನು ತುಮಕೂರು ವಿಶ್ವ ವಿದ್ಯಾಲಯದಲ್ಲಿ ಸ್ವಾಗತಿಸಿ ಮಾತನಾಡಿ, ಭಾಷೆಗಳು, ವಿವಿಧ ಬಗೆಯ ಸಂಸ್ಕೃತಿ ವೈವಿಧ್ಯತೆಯ ನಡುವೆಯೂ ಏಕತೆ ಮತ್ತು ಸಾಮರಸ್ಯದಿಂದ ಕೂಡಿ ಬಾಳುತ್ತಿರುವುದು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕೈಗಾರಿಕೋದ್ಯಮಿ ಚಿದಾನಂದ್ಎಸ್.ಪಿ. ಮಾತನಾಡಿ, ಯಾವುದೇ ಜಾತಿ-ಧರ್ಮವಿರಲಿ, ಭಾರತೀಯರಾದ ನಾವೆಲ್ಲರೂ ಒಂದು ಎನ್ನುವ ತತ್ವ ಸಿದ್ಧಾಂತವನ್ನು ರಾಷ್ಟ್ರೀಯ ಏಕಾತ್ಮತಾ ಯಾತ್ರೆಯು ಹೊಂದಿದೆ. ಸ್ವಯಂ ಉದ್ಯೋಗದ ಮೂಲಕ ವಿದ್ಯಾರ್ಥಿಗಳೆಲ್ಲರೂ ಸಬಲರಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು.
ಮೇಘಾಲಯದ ಎಬಿವಿಪಿ ಪ್ರತಿನಿಧಿ ಕಮಲೇಶ್ ಸಿಂಗ್ ಮಾತನಾಡಿ, ತುಮಕೂರಿನ ಆತಿಥ್ಯ ನಮಗೆ ಆನಂದ ನೀಡಿದೆ. ಇಲ್ಲಿನ ಜನ ತುಂಬಾ ಒಳ್ಳೆಯವರು ಹಾಗೂ ಇಲ್ಲಿನ ಸಂಸ್ಕೃತಿ ಮತ್ತು ಆಚರಣೆ ಬಹಳಷ್ಟು ವೈಶಿಷ್ಟ್ಯತೆ ಮತ್ತು ಸಿರಿಯಿಂದ ಕೂಡಿ ಸಮೃದ್ಧವಾಗಿದೆ ಎಂದರು.
ತಿಪಟೂರಿನ ಕುಮಾರ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ ಮಾತನಾಡಿ, ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ನಮ್ಮ ಮನೆಗಳಲ್ಲಿ ವಾಸ್ತವ್ಯ ಹೂಡಿ ಮನೆ ಮಕ್ಕಳಂತೆ ಬಾಳುವಂತಹ ಈ ವಿಶೇಷ ಕಾರ್ಯಕ್ರಮವೂ ಏಕತೆ ಮತ್ತು ಭಾರತೀಯತೆಯನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಕೈಗಾರಿಕೋದ್ಯಮಿ ರಮೇಶ್ ಬಾಬು ಆರ್.ಎಲ್.ಮಾತನಾಡಿ, ಪ್ರತಿಯೊಬ್ಬರಿಗೂ ದೊಡ್ಡ ಆಲೋಚನೆ, ಬಲಿಷ್ಠ ಗುರಿ ಇರಬೇಕು. ಸರ್ವೇಜನಃ ಸುಖಿನೋ ಭವಂತು ಎನ್ನುವ ಮಾತನ್ನು ನಿತ್ಯವೂ ಸತ್ಯವಾಗಿಸುವತ್ತ ನಮ್ಮ ಚಿತ್ತವಿರಬೇಕು ಎಂದರು.
ನಾಗಾಲ್ಯಾಂಡ್ನ ಎಬಿವಿಪಿ ಪ್ರತಿನಿಧಿ ಲೆನಿಂಟ್ ಟೆಬೊ, ಕೈಗಾರಿಕಾ ಸಲಹೆಗಾರ ಸಾಗರನಹಳ್ಳಿ ಪ್ರಭು, ತುಮಕೂರು ವಿವಿ ಶೈಕ್ಷಣಿಕ ಮಂಡಳಿಯ ಸದಸ್ಯ ಡಾ.ಎಂ. ವಿ.ಅಜಯ್ ಕುಮಾರ್, ರೇಖಾ.ಎನ್, ವಾಣಿಜ್ಯೋದ್ಯಮಿ ರುದ್ರೇಶ್ ಟಿ.ಎನ್, ಉದ್ಯಮಿ ಚಿದಾಂನದ ಎಸ್.ಪಿ., ತುಮಕೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ರಾಜು, ಸುನೀಲ್ ಪ್ರಸಾದ್.ಟಿ.ಎಸ್, ಅಪ್ಪು ಪಾಟೀಲ್, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ್.ಜಿ.ಟಿ, ತುಮಕೂರುವಿವಿ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಪರಶುರಾಮ್.ಕೆ.ಜಿ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ.ಪೃಥ್ವಿರಾಜ.ಟಿ. ಭಾಗವಹಿಸಿದ್ದರು.
Comments are closed.