ತುಮಕೂರು: ಹಿಂದುಳಿದ ಅಲೆಮಾರಿ ಜನಾಂಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ ಎಂದು ಆರೋಪಿಸಿ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಲೆಮಾರಿ ಜನಾಂಗದ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಅಲೆಮಾರಿ ಜನಾಂಗಗಳ ಸಂಘಟನೆ ದಲಿತ ಸಂಘರ್ಷ ಸಮಿತಿ ದಕ್ಕಲಿಗರ ಸಂಘ ಹಾಗೂ ಇನ್ನಿತರೆ ದಲಿತಪರ ಸಂಘಟನೆಗಳ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಅಲೆಮಾರಿ ಜನಾಂಗ ಸೇರಿದಂತೆ ಹಿಂದುಳಿದ ತಳ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ 550 ಕೋಟಿ ಅನುದಾನವನ್ನು ವಾಪಸ್ ಪಡೆದಿದ್ದು ಈ ಕೂಡಲೇ ತಳ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅಷ್ಟು ಹಣ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತಪರ ಹೋರಾಟಗಾರ ಕೊಟ್ಟ ಶಂಕರ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಅಲೆಮಾರಿ ಜನಾಂಗ ಸೇರಿದಂತೆ ಹಿಂದುಳಿದ ತಳ ಸಮುದಾಯದ ಹಿತ ರಕ್ಷಣೆ ಮಾಡಲು ಆಸಕ್ತಿ ಇಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಂತೆ ಸರ್ಕಾರ ನಡೆದುಕೊಳ್ಳಬೇಕು. ತಳ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 550 ಕೋಟಿ ಹಣವನ್ನು ಸರ್ಕಾರ ಯಾವುದೋ ಕಾರಣ ನೀಡಿ ವಾಪಸ್ ಪಡೆದಿರುವುದು ಖಂಡನೀಯ. ದೇಶಕ್ಕೆ ಹೆಲಿಕಾಪ್ಟರ್ ಕೊಡುತ್ತೇವೆ ಎಂದು ಹೇಳಿಕೊಳ್ಳುವ ಸರ್ಕಾರ ಅಲೆಮಾರಿಗಳಿಗೆ ಸೂರು ಕಲ್ಪಿಸುವಲ್ಲಿ ವಿಫಲವಾಗಿದೆ. ಕಾನೂನಿನ ಪ್ರಕಾರ ದಲಿತರಿಗೆ ಮೀಸಲಿಟ್ಟ ಹಣ ವಾಪಸ್ ಪಡೆಯುವುದು ಅಪರಾಧವಾಗಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಈ ನಿರ್ಣಯ ತೆಗೆದುಕೊಂಡು ನೈಜ ಅಪರಾಧಿಗಳಾಗಿದ್ದಾರೆ. ಸರ್ಕಾರದ ವಿರುದ್ಧ ಮತ್ತು ಅಧಿಕಾರಿಗಳ ವಿರುದ್ಧ ಏಕೆ ಪ್ರಕರಣ ದಾಖಲಿಸಬಾರದು ಎಂದು ಪ್ರಶ್ನಿಸಿದರು.
ಸರ್ಕಾರದ ಎಸ್ಎಸ್ಪಿ ಹಾಗೂ ಟಿಎಸ್ಪಿ ಯೋಜನೆಯಲ್ಲಿ ಹಣವನ್ನು ಪರಿಶಿಷ್ಟ ಜಾತಿ ವರ್ಗಗಳಿಗೆ ವಿನಿಯೋಗಿಸಬೇಕೆಂಬ ಕಾನೂನಿದ್ದರೂ ಸಹ ರಾಜ್ಯ ಸರ್ಕಾರ ಇದು ಯಾವುದನ್ನು ಲೆಕ್ಕಿಸದೆ ಗಾಳಿಗೆ ತರುವ ಕೆಲಸ ಮಾಡಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ದಲಿತರಿಗೆ ಮೀಸಲಿಟ್ಟ 550 ಕೋಟಿ ಹಣ ಮಂಜೂರು ಮಾಡಿ ತಳ ಸಮುದಾಯದ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
Comments are closed.